LATEST NEWS
ದಿನಕ್ಕೊಂದು ಕಥೆ- ಮರಗಳ ಪಯಣ
ಮರಗಳ ಪಯಣ
ಯಾಕೋ ನಿದ್ದೆ ಮನೆಯ ಹೊರಗಡೆ ಅಡ್ಡಾಡುತ್ತಿದ್ದೆ. ಮನೆಯೊಳಗೆ ಬಂದು ನನ್ನ ಮನದೊಳಗೆ ಸೇರುತ್ತಲೇ ಇರಲಿಲ್ಲ .ಹಾಗಾಗಿ ಜಗಲಿಯಲ್ಲಿ ಬಂದು ಕೂತೆ. ದಿನವೂ ಬೀಸುವ ಗಾಳಿಯೊಂದಿಗೆ ಅದೇನೋ ಚಲಿಸುವ ಶಬ್ದ ಕೇಳುತ್ತಿತ್ತು. ದೃಷ್ಟಿ ಹಾಯಿಸಿದರೆ ಕಂಡದ್ದೇನು?.
ಮರಗಳೆಲ್ಲ ಊರು ಬಿಡುತ್ತಿವೆ. ನಾ ಮರಕೋತಿ ಆಡಿದ ಮರ ,ಕಲ್ಲೆಸೆದ ಮರ, ಕಾಯಿ ಕಿತ್ತ ಮರ ,ನೋಡಿ ಮರ,ಹಿಂದೊಮ್ಮೆ ಬೋಳಾಗಿ ಮತ್ತೆ ಚಿಗುರಿದ್ದ ಮರ. ಎಲ್ಲ ಮರಗಳು ಪಯಣ ಹೊರಟಿವೆ. ಬೇರಿನ ಸಮೇತ ಬೀಜವನ್ನೂ ಉಳಿಸದೆ. ಭಯವಾಯಿತು. ಆದರೂ ಕಾರಣ ಬೇಕಲ್ಲ!. ನಿಲ್ಲಿಸಿ ಕೇಳಿದರೆ, “ಏನು ಪ್ರಯೋಜನ, ನೀವ್ಯಾರು ಉಳಿಸುತ್ತಾನೆ ಇಲ್ಲ. ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಉಳಿಯೋದು ಯಾಕೆ?.
ನಿಮ್ಮ ಮನೆ ನಿರ್ಮಾಣಕ್ಕೆ ನಮ್ಮ ಸಾವು ,ನಿಮ್ಮ ಅಭಿವೃದ್ಧಿ ಎಂಬ ಅಹಂಕಾರಕ್ಕೆ ನಮ್ಮ ಬಲಿ ,ನಿಮಗೆ ಮುಂದಿನ 25 ವರ್ಷದವರೆಗಿನ ಭವಿಷ್ಯವನ್ನು ಯೋಚಿಸಲಾಗೋದು ಇಲ್ಲವೇ?. ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ಯೋಜನೆ ಬಂದು ನಮ್ಮನ್ನ ಸಾಯಿಸ್ತೀರ. ಬೇಡಪ್ಪ… ನೀವು ಬೆಳೆಸುವುದಿಲ್ಲ ಬರೀ ಸಾಯಿಸುವವರು. ನಿಮ್ಮೂರಿನ ಸಹವಾಸ ಸಾಕು. ನಮಗೆ ನಮ್ಮ ಗುಂಪಿಗೆ ಯಾವೂರು ಹೊಂದಾಣಿಕೆ ಆಗುತ್ತೋ ಅಲ್ಲಿಯವರೆಗೆ ಚಲಿಸುತ್ತಾನೆ ಇರುತ್ತೇವೆ. ನೀವೇನಾದರೂ ಮಾಡಿಕೊಳ್ಳಿ ?.ಪಯಣ ಹೊರಟಿತ್ತು ……….”
ದಿಗ್ಗನೆದ್ದು ಕುಳಿತೆ ಮೈ ಬೆವರಿತ್ತು .ಮರುದಿನ ರಸ್ತೆ ಅಗಲಕ್ಕೆ ಅಪ್ಪ ಕಡಿಯ ಬೇಕೆಂದಿದ್ದ ಮರವನ್ನು ಅವರಲ್ಲಿ ಬೇಡಿ ಉಳಿಸುವ ಯೋಚನೆ ಮಾಡಿ ಮತ್ತೆ ನಿದ್ದೆಗೆ ಜಾರಿದೆ….
ಧೀರಜ್ ಬೆಳ್ಳಾರೆ