LATEST NEWS
ದಿನಕ್ಕೊಂದು ಕಥೆ- ಅಂದುಕೊಳ್ಳುವುದು
ಅಂದುಕೊಳ್ಳುವುದು
ಬೇಜಾರು ನೋವಾದಾಗ ಒಬ್ಬೊಬ್ಬರು ಒಂದೊಂದು ತರಹ ವರ್ತಿಸ್ತಾರೆ. ಇಲ್ಲಿ ನಮ್ಮ ಪೃಥ್ವೀಶ್ ಗೆ ನೋವಿನ ಕಿರು ಬಿಸಿ ಮುಟ್ಟಿದರೂ ಕೆಲಸದ ಕಡೆಗೆ ಓಡುತ್ತಾನೆ. ಬೆವರು ಇಳಿದು ದೇಹದಂಡನೆಯಾಗುವವರೆಗೂ ದುಡಿಯುತ್ತಾನೆ. ಅವನ ನೋವುಗಳ ಕಾರಣದ ಪುಟಕ್ಕೆ ಪೂರ್ಣವಿರಾಮ ನೀಡಲು ಅರ್ದಾಂಗಿ ಪೂಜಾ ಬರಬೇಕಾಗಿತ್ತು.
ಆ ದಿನ ಅವನ ಜೊತೆ ಪೂಜಾ ಮಾತನಾಡುತ್ತಾ “ಪೃಥ್ವಿ ನಾವು ನಿನ್ನೆ, ಇವತ್ತು ಮತ್ತು ನಾಳೆ ಈ ಮೂರು ದಿನಗಳನ್ನು ನೆಮ್ಮದಿಯಾಗಿ ಕಳೀಬೇಕು. ನೋವಿಗೆ ಮುಖ್ಯ ಕಾರಣವೇ”ಅಂದುಕೊಳ್ಳುವುದು”. ಮುಂದೆ ಆಗಬಹುದಾದ್ದನ್ನ, ಆಗಿರಬಹುದಾದದ್ದನ್ನ, ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಿರಬಹುದು, ಈ ಕಾರಣಕ್ಕೆ ಹೀಗಾಗಿದೆ, ಎಂದೆಲ್ಲಾ ನಾವು ಅಂದುಕೊಂಡೆ ನಮ್ಮ ಅದ್ಭುತ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇವೆ .
ನಮ್ಮ ನೋವಿಗೆ, ಇನ್ನೊಬ್ಬರ ನೋವಿಗೆ ಕಾರಣವಾಗ್ತಾ ಇದ್ದೇವೆ. ಸರೀ ನೀವ್ಯಾಕೆ ಅಂದುಕೊಳ್ಳುತ್ತೀರ? ಅಲ್ಲ ,ಅದು ಒಳ್ಳೆಯದಾಗಿದ್ದರೆ ಖುಷಿ ಆದರೆ ಈಗ ಹಾಗಿಲ್ಲವಲ್ಲ. ನೀವು ದುಃಖಿಸುವುದು ‘ಅವರು’ ಅಂದುಕೊಂಡಿರುವ ಕಾರಣಕ್ಕೆ. ಇಲ್ಲಿ ಮುಖತಃ ಮಾತನಾಡಿ ಪರಿಹರಿಸಿಕೊಳ್ಳುವ ಜಾಣತನ ಇಲ್ಲದಮೇಲೆ ಮಾನವನಾಗಿ ಹುಟ್ಟಿದ್ದು ವ್ಯರ್ಥ.ಇಷ್ಟು ದಿನ ನೀವು ಒಬ್ಬರಾಗಿ ಇದ್ದೀರಿ ,ಈಗ ಜೊತೆ ನಡೆಯೋಕೆ ನಾನಿದ್ದೀನಲ್ಲ. ಮುಂದಿನ ದಿನವನ್ನು ಅಂದುಕೊಳ್ಳುವುದಕ್ಕಿಂತ ಪ್ರತಿಕ್ಷಣ ಬದುಕೋಣ”.
ಪೃಥ್ವಿ ಪೂಜಾಳ ತೊಡೆ ಮೇಲೆ ಮಲಗಿದ್ದ. ಅವನ ತುಟಿಯಂಚು ಹಲವು ವರ್ಷದ ನಂತರ ನಗುತ್ತಿತ್ತು ….
ಧೀರಜ್ ಬೆಳ್ಳಾರೆ