LATEST NEWS
ದಿನಕ್ಕೊಂದು ಕಥೆ- ತಪ್ಪಲ್ಲವೇ?
ತಪ್ಪಲ್ಲವೇ?
ಅಲ್ಲಿ ಮೇಲೆ ನಿಂತ ಚೈತನ್ಯ ಶಕ್ತಿ ಎನಂದುಕೊಳ್ಳುತ್ತಿದ್ದೀಯೋ ಗೊತ್ತಿಲ್ಲ. ಖಂಡಿತ ನೋವಾಗಿರುತ್ತೆ. ತಲೆಮೇಲೆ ಹೊತ್ತು ಮೆರೆಸಿದರು ಅರಿವಿನಿಂದಲೋ ಅಥವಾ ಗೊತ್ತಿಲ್ಲದೆಯೋ ಕಾಲಕಸ ಮಾಡಿರುವುದು ನೋವು ತರಿಸಿರುವುದು ಖಂಡಿತ .ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನಾ ಬರುವ ದಾರಿಯಲ್ಲಿ ಕೆಲವೊಂದು ಘಟನೆಗಳು ಈ ಯೋಚನೆಗೆ ಇಂಬು ನೀಡುತ್ತಿವೆ.
ಎಲ್ಲವನ್ನ ಪ್ರಚಾರ ಮಾಡುತ್ತೇವೆ. ಊರ ಜಾತ್ರೆ ,ದೈವದ ನೇಮ. ಅದಕ್ಕಾಗಿ ಕರಪತ್ರ ಮಾಡಿ ಹಂಚುತ್ತೇವೆ . ಬ್ಯಾನರುಗಳನ್ನು ತೂಗು ಹಾಕುತ್ತೇವೆ. ಚಿತ್ರಗಳು ರಾರಾಜಿಸುತ್ತವೆ. ಭಕ್ತಿಯನ್ನು ಮೂಡಿಸುತ್ತದೆ.ಕಾರ್ಯಕ್ರಮ ಮುಗಿದ ಮೇಲೆ ಹಗ್ಗ ತುಂಡಾಗಿಯೋ,ಗೆದ್ದಲು ಹಿಡಿದೋ,ಗಾಳಿಗೆ ಹರಿದೋ ಯಾವುದೋ ಮೂಲೆಯಲ್ಲಿ ಕಾಲ ಕಸವಾಗಿರುತ್ತದೆ.
ಚರಂಡಿಯಲ್ಲಿ ತೇಲುತ್ತದೆ. ನಾವು ನಂಬುವ ನಮ್ಮ ದೈವವನ್ನು ಗರ್ಭಗುಡಿಯಲ್ಲಿ ದೇವರ ಭಂಡಾರದಲ್ಲಿ ಕಂಡು ಕೈಮುಗಿಯುವರು ನಾವಲ್ಲವೇ. ಹೀಗೆ ಮಾಡಿದರೆ ನಾವು ಅವಮಾನ ಮಾಡಿದಂತಾಗುವುದಿಲ್ಲವೇ. ಆ ಶಕ್ತಿಗಳು ನಮ್ಮನ್ನು ಮಕ್ಕಳೆಂದು ಕ್ಷಮಿಸಬಹುದು ಆದರೆ ನಾವು ಮಕ್ಕಳಾಗಿ ನಮ್ಮನ್ನ ಸಲಹುವ ದೇವರನ್ನು ಹೀಗೆ ಬಿಸಾಡುವುದು ಸರಿಯೇನು. ಆಲೋಚನೆ ಓಡುತ್ತಲೇ ಇತ್ತು.
ಕೈಮುಗಿದು ಆಗಸದೆಡೆಗೆ ದಿಟ್ಟಿಸಿ ಬೇಡಿದೆ. ಈ ಆಲೋಚನೆಯನ್ನ ಅವನನ್ನ ನಂಬುವ ಎಲ್ಲರಿಗೂ ತಿಳಿಸುವಂತ ನನ್ನದೊಂದು ಬೇಡಿಕೆಯ ಪ್ರಾರ್ಥನೆ ಮೇಲೇರಿದೆ. ಅದು ಅವನಲ್ಲಿಗೆ ತಲುಪಿ ತರಂಗವಾಗಿ ಎಲ್ಲರ ಮನದೊಳಗೆ ಪ್ರವಹಿಸಲಿ ಅನ್ನೋದೊಂದೇ ಆಸೆ …..
ಧೀರಜ್ ಬೆಳ್ಳಾರೆ