LATEST NEWS
ದಿನಕ್ಕೊಂದು ಕಥೆ- ಮೌನ ಮಾತಾಡುವ ಜಾಗ

ಮೌನ ಮಾತಾಡುವ ಜಾಗ
ನೀವೊಮ್ಮೆ ನಡೆದು ಬರಬೇಕು ಇಲ್ಲಿಗೆ. ಒಂದಷ್ಟು ಅಡೆತಡೆಗಳು ಖಂಡಿತ ಎದುರಾಗುತ್ತವೆ. ಆದರೆ ಮಾರ್ಗ ತ್ಯಜಿಸಿ ಹಿಂತಿರುಗಬೇಡಿ. ಒಮ್ಮೆ ತಲುಪಿ ನೋಡಿ. ನಮ್ಮೊಳಗಿನ ಬೆಳಕನ್ನು ಕಾಣಲು ಕತ್ತಲೆಯೊಂದು ದೊರಕುತ್ತದೆ. ನೇಸರನ ಒಂದರೆಕ್ಷಣ ಬಿಡದೆ ನೋಡುವ ಉತ್ಸುಕತೆಯಿಂದ ಹಸಿರೆಲ್ಲ ಮೇಲೆದ್ದು ನಿಂತು ತೂಗುತ್ತಿದೆ.
ಉಸಿರಿನ ಗಾಳಿಯ ಕಾರ್ಖಾನೆ ಭದ್ರವಾಗಿ ನೆಲೆಯೂರಿದೆ. ನೀ ತಲೆತಗ್ಗಿಸಿ ಬರಬೇಕೆಂದು ಹಸಿರು ಬಾಂಧವ್ಯ ಬೆಸೆಯುವ ಕಮಾನುಗಳನ್ನು ಸೃಷ್ಟಿಸಿದೆ. ಏರಿಳಿತಗಳನ್ನು ದಾಟಿಯೇ ಒಳ ಬಂದಾಗ ಮೌನ ಮಾತನಾಡುವ ಸ್ಥಳವೊಂದು ಎದುರಾಗುತ್ತದೆ. ಇಲ್ಲಿ ಮೌನ ನೆಮ್ಮದಿಯಲ್ಲಿ ಬದುಕಿದೆ.

ಗದ್ದಲ ತೊರೆದು ಮೌನದ ಜೊತೆ ಬಾಂಧವ್ಯ ಬೆಸೆದು ಕೈ ಹಿಡಿದು ಹೆಜ್ಜೆ ಹಾಕುದಾದರೆ ಇಲ್ಲಿ ಬನ್ನಿ .ನನಗೆ ಕೆಲವು ದಿನಗಳನ್ನು ಇಲ್ಲಿ ಕಳೆದ ಮೇಲೊಂದು ಸತ್ಯದ ಅರಿವಾಯಿತು. “ಮೌನ ಒಳಗಿರುವುದು ಹೊರಗಲ್ಲ “.ಒಳಗೆ ಸಾಗುವ ಹಾದಿಯ ಗುರುತಿಸಿ ನಡೆಯಬೇಕಷ್ಟೆ .ಮೊದಲ ಹೆಜ್ಜೆಯನ್ನ ಭದ್ರವಾಗಿ ಊರಿದ್ದೇನೆ. ತಲುಪುವ ನಂಬಿಕೆಯಿದೆ, ನನ್ನ ಮೇಲೆ ವಿಶ್ವಾಸವಿದೆ. ಇನ್ನೇನು ಬೇಕು? ಅಲ್ವಾ!…..
ಧೀರಜ್ ಬೆಳ್ಳಾರೆ