KARNATAKA
ಧಾರವಾಡ : ನವಿಲು ತೀರ್ಥ ಜಲಾಶಯದಲ್ಲಿ ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಮಹಿಳೆ ಆತ್ಮಹತ್ಯೆ..!

ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಮಹಿಳೆಯೋರ್ವಳು ಧಾರವಾಡದ ನವಿಲು ತೀರ್ಥ ಜಲಾಶಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಧಾರವಾಡ: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಮಹಿಳೆಯೋರ್ವಳು ಧಾರವಾಡದ ನವಿಲು ತೀರ್ಥ ಜಲಾಶಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪ್ರಿಯದರ್ಶಿನಿ ಪಾಟೀಲ (40) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ.
ಪುತ್ರನ ಅನಾರೋಗ್ಯದ ವಿಚಾರವಾಗಿ ಆಸ್ಟ್ರೇಲಿಯಾದ ಕಠಿಣ ಕಾನೂನಿನ ವಿರುದ್ಧ ಹೋರಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ನಗರದ ಸಪ್ತಾಪುರ ನಿವಾಸಿ ಎಸ್.ಎಸ್. ದೇಸಾಯಿ ಅವರ ಪುತ್ರಿಯಾಗಿರುವ ಪ್ರಿಯದರ್ಶಿನಿ ಪಾಟೀಲರ ಮೃತ ದೇಹ ಆಗಸ್ಟ್ 20 ರಂದು ಸವದತ್ತಿ ತಾಲೂಕಿನ ವಟ್ನಾಳ ಗ್ರಾಮದ ಬಳಿಯ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿತ್ತು.
ಇವರ ಪತಿ ಲಿಂಗರಾಜ ಪಾಟೀಲ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಪುತ್ರ ಅಮರ್ತ್ಯ, ಪುತ್ರಿ ಅಪರಾಜಿತ ಜೊತೆ ವಾಸವಾಗಿದ್ದರು.
ಕೆಲ ವರ್ಷಗಳಿಂದ ಪುತ್ರ ಅಮರ್ತ್ಯನ ಆರೋಗ್ಯ ಸಮಸ್ಯೆ ಎದುರಾಗಿತ್ತು.
ಇದರಿಂದ ನೊಂದಿದ್ದ ಪ್ರಿಯದರ್ಶಿನಿ, ಆಸ್ಪತ್ರೆಯ ವೈದ್ಯಕೀಯ ವೈಫಲ್ಯ ಎಂದು ದೂರು ದಾಖಲಿಸಿದ್ದರು. ಆದರೆ, ಆಸ್ಟ್ರೇಲಿಯಾ ನೆಲದ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಇವರ ವಿರುದ್ಧವೇ ಕೇಳಿಬಂದಿತ್ತು.
ಹೀಗಾಗಿ ಅಲ್ಲಿನ ಸರ್ಕಾರ ಇಬ್ಬರೂ ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಪೋಷಣೆ ಮಾಡುತ್ತಿತ್ತು.
ಮಕ್ಕಳನ್ನು ಆಸ್ಟ್ರೇಲಿಯಾದಿಂದ ಕರೆತರಲು ಪ್ರಯತ್ನಿಸಿದ್ದ ಪ್ರಿಯದರ್ಶಿನಿ, ಅಲ್ಲಿನ ಕಠಿಣ ಕಾನೂನುಗಳ ಎದುರು ಸೋತಿದ್ದರು.
ಆಸ್ಟ್ರೇಲಿಯಾದ ಪೌರತ್ವ ಪಡೆದಿದ್ದ ಮಕ್ಕಳು ಅತಂತ್ರರಾದರು ಎಂಬ ಕೊರಗಿನಲ್ಲಿ ತವರುಮನೆಗೆ ಹೋಗುವುದಾಗಿ ಹೇಳಿ ಆ.18ರಂದು ಸಿಡ್ನಿಯಿಂದ ಹೊರಟಿದ್ದರು.
ಬೆಂಗಳೂರಿಗೆ ಬಂದು ಅಲ್ಲಿಂದ ತವರು ಮನೆಗೆ ಹೋಗದೆ ಸವದತ್ತಿಗೆ ಹೋಗಿ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದಕ್ಕೂ ಮೊದಲು ಪ್ರಿಯದರ್ಶಿನಿ ತನ್ನ ಕೆಲ ಸಾಮಗ್ರಿಗಳನ್ನು ತವರು ಮನೆಯ ವಿಳಾಸಕ್ಕೆ ಕೋರಿಯರ್ ಮಾಡಿದ್ದರು.
ಅದರಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಆಸ್ಟ್ರೇಲಿಯಾದ ಕಾನೂನು ವ್ಯವಸ್ಥೆಯ ಬಗ್ಗೆಯೂ ವಿವರಿಸಿದ್ದಾರೆ.
ಪತ್ನಿಯ ಆತ್ಮಹತ್ಯೆ ವಿಷಯ ತಿಳಿದು ಆಸ್ಟ್ರೇಲಿಯಾದಿಂದ ಪತಿ ಲಿಂಗರಾಜ ಪಾಟೀಲ ಗುರುವಾರ ಧಾರವಾಡಕ್ಕೆ ಆಗಮಿಸಿದ್ದು ಕುಟುಂಬ ಸದಸ್ಯರು ಪ್ರಿಯದರ್ಶಿನಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.