ಬೆಳ್ತಂಗಡಿ ಜುಲೈ 15 : ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಬಹುನಿರೀಕ್ಷಿತ ಅಂತಿಮ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ. ಎಸ್ಐಟಿ ಅಧಿಕಾರಿಗಳು ಇಂದು 3,082 ಪುಟಗಳನ್ನು ಒಳಗೊಂಡಿರುವ ವರದಿಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ಮುಂದೆ 12 ಪ್ರತ್ಯೇಕ ಕಡತಗಳಲ್ಲಿ ಸಲ್ಲಿಕೆ ಮಾಡಿದರು. ಈ ಹಿಂದೆ ಸಲ್ಲಿಕೆಯಾಗಿದ್ದ 3923 ಪುಟಗಳ ವರದಿಯನ್ನೂ ಸೇರಿಸಿ, ಈ ಪ್ರಕರಣದ ಒಟ್ಟು ತನಿಖಾ ದಾಖಲೆಗಳು ಈಗ ಬರೋಬ್ಬರಿ 7005 ಪುಟಗಳಾಗಿವೆ.

ವರದಿ ಸಲ್ಲಿಕೆಯಾಗುವ ಸಂದರ್ಭದಲ್ಲಿ ವಿಶೇಷ ತನಿಖಾ ತಂಡದ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ. ಸೈಮನ್, ಇನ್ಸ್ಪೆಕ್ಟರ್ ಕುಸುಮಾಧರ್, ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ತನಿಖಾ ತಂಡದ ಇತರ ಸದಸ್ಯರು ನ್ಯಾಯಾಲಯದಲ್ಲಿ ಹಾಜರಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಂತಿಮ ವರದಿಯ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, “ವರದಿಯು ಸದ್ಯ ನ್ಯಾಯಾಂಗ ದಾಖಲೆಯಾಗಿರುವುದರಿಂದ ಗೌಪ್ಯತೆ ಕಾಯ್ದುಕೊಳ್ಳಬೇಕಿದೆ. ನ್ಯಾಯಾಲಯವೇ ಇದನ್ನು ಪರಿಶೀಲಿಸಲಿದೆ” ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ 2025ರ ನವೆಂಬರ್ 20 ರಂದು ಎಸ್ಐಟಿ ತಂಡವು ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 215ರ ಅಡಿಯಲ್ಲಿ ದೂರುದಾರ ಸಿ.ಎನ್. ಚಿನ್ನಯ್ಯ ಹಾಗೂ ಆತನಿಗೆ ಬೆಂಬಲ ನೀಡಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ವಿಠಲ್ ಗೌಡ ಮತ್ತು ಸುಜಾತಾ ಭಟ್ ವಿರುದ್ಧ ಮೊದಲ ಹಂತದ ವರದಿ ಸಲ್ಲಿಸಿತ್ತು. ತದನಂತರ ಕೋರ್ಟ್ ನೀಡಿದ ಆದೇಶದ ಮೇರೆಗೆ ಇಂದು ಅಂತಿಮ ವರದಿ ಸಲ್ಲಿಕೆಯಾಗಿದೆ.
2025ರ ಜುಲೈ ತಿಂಗಳಲ್ಲಿ ಧರ್ಮಸ್ಥಳದ ಮಾಜಿ ಕೆಲಸಗಾರ ಚಿನ್ನಯ್ಯ ಎಂಬಾತ ಧರ್ಮಸ್ಥಳ ಸುತ್ತಮುತ್ತಲ ಕಾಡುಗಳಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳ ಮೃತದೇಹಗಳನ್ನು ಅಕ್ರಮವಾಗಿ ಸಮಾಧಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದನು. ಇದು ಇಡೀ ರಾಜ್ಯಾದ್ಯಂತ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ತದನಂತರ ಈ ರಹಸ್ಯ ಪತ್ತೆ ಮಾಡಲು ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚನೆ ಮಾಡಿತ್ತು. ಇದೀಗ 7 ಸಾವಿರ ಪುಟಗಳ ವರದಿಯ ಸಲ್ಲಿಕೆಯಾಗಿದ್ದು, ಇಡೀ ರಾಜ್ಯದ ಕಣ್ಣು ಬೆಳ್ತಂಗಡಿ ಕೋರ್ಟ್ನ ತೀರ್ಪಿನ ಮೇಲಿದೆ.