ಬೆಳ್ತಂಗಡಿ ಅಗಸ್ಟ್ 12: ಧರ್ಮಸ್ಥಳ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ನೆಲದಡಿ ಮೃತದೇಹಗಳ ಅವಶೇಷ ಇದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಶೋಧ ಕಾರ್ಯವನ್ನು ಮಂಗಳವಾರ ಆರಂಭಿಸಿತು.

ದೂರುದಾರ ಗುರುತಿಸಿರುವ 13ನೇ ಜಾಗದಲ್ಲಿ ಮಂಗಳವಾರ ಜಿಪಿಆರ್ ಕಾರ್ಯಾಚರಣೆ ನಡೆಸಲಾಗಿದ್ದು, ಒಂದು ಹಂತದ ಕಾರ್ಯಾಚರಣೆ ಮಧ್ಯಾಹ್ನ ವೇಳೆ ಪೂರ್ಣಗೊಂಡಿದೆ. ಈ ವೇಳೆ ಯಾವುದೇ ರೀತಿಯ ಸಿಗ್ನಲ್ ದೊರೆತಿಲ್ಲ ಎಂದು ಹೇಳಲಾಗಿದೆ.

ನೇತ್ರಾವತಿ ಅಜಿಕುರಿ ರಸ್ತೆಯ ಸುಮಾರು ನೂರು ಮೀಟರ್ ಗೂ ಅಧಿಕ ದೂರದ ವರೆಗೂ ರಸ್ತೆ ಬದಿಯಲ್ಲಿ ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ನಡೆಸಲಾಗಿದೆ. ಎಸ್ಐಟಿ ಹಿರಿಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಟಾಚಿಯನ್ನು ಕರೆಸಲಾಗಿದೆ. ಸ್ಥಳಕ್ಕೆ ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಾಂತಿ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಾಚರಣೆಗೆ ನೇತೃತ್ವ ವಹಿಸಿದ್ದರು. ಬಳಿಕ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅವರು ವಾಪಸ್ಸಾದರು.

ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಗುರುತಿಸಿರುವ 13ನೇ ಜಾಗದಲ್ಲಿ ಜಿಪಿಆರ್ ಶೋಧ ಕಾರ್ಯಾಚರಣೆಯ ಬೆನ್ನಲ್ಲೇ ಎಸ್ಐಟಿ ಅಗೆಯುವ ಕಾರ್ಯವನ್ನು ಆರಂಭಿಸಿದೆ. ಜಿಪಿಆರ್ ಮೂಲಕ ನಡೆಸಿದ ಸ್ಥಳದಲ್ಲಿ ಮಧ್ಯಾಹ್ನದ ಬಳಿಕ ಹಿಟಾಚಿ ಬಳಸಿ ಉತ್ಖನನ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಸಾಕ್ಷಿ ದೂರುದಾರ ಈ ಹಿಂದೆ ಎಸ್ಐಟಿಗೆ ಮಾಹಿತಿ ನೀಡಿದ್ದ, ಇದೀಗ ಅಧಿಕಾರಿಗಳ ತಂಡ ಸಾಕ್ಷಿದಾರನ ಉಪಸ್ಥಿತಿಯಲ್ಲಿ ಅಗೆಯುವ ಕಾರ್ಯ ಆರಂಭಿಸಿದೆ.