BELTHANGADI
ಧರ್ಮಸ್ಥಳದ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡದಂತೆ ಜಾನ್ ಡೋ ಆದೇಶ – ಎಲ್ಲಾ ವಿಡಿಯೋ ಡಿಲೀಟ್ ಮಾಡಲು ಕೋರ್ಟ್ ಸೂಚನೆ

ಬೆಂಗಳೂರು ಮಾರ್ಚ್ 26: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅವಹೇಳನಕ್ಕೆ ಇದೀಗ ನ್ಯಾಯಾಲಯ ಗರಂ ಆಗಿದ್ದು. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ಜಾನ್ ಡೋ (ಅಶೋಕ ಕುಮಾರ್) ಆದೇಶವನ್ನು ಮಾಡಿದೆ. ಜತೆಗೆ ಈವರೆಗೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡುವಂತೆಯೂ ಸೂಚನೆ ನೀಡಿದೆ.
ಇತ್ತೀಚೆಗೆ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂಡಿ ಎಂಬ ಯೂಟ್ಯೂರ್ ವಿಡಿಯೋ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಕುಟುಂಬದ ಕುರಿತು ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಬೆನ್ನಲ್ಲೆ ಎ.ಎಸ್.ಸುಖೇಶ್ ಮತ್ತು ಶೀನಪ್ಪ ಸೇರಿದಂತೆ ನಾಲ್ವರು ದಾವೆ ಹಾಕಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯೂ ಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಮತ್ತು ಅಜಾಗೂರಕ ಆರೋಪಗಳನ್ನು ಹೊತ್ತ ಸುದ್ದಿಗಳನ್ನು ಮತ್ತು ವಿಡಿಯೊಗಳನ್ನು ರಚಿಸಿ ಬಿತ್ತರಿಸಲಾಗುತ್ತಿದೆ. ಈ ತರದ ವಿಡಿಯೋ ಮಾಡುವುದು, ಅಪ್ಲೋಡ್ ಮಾಡುವುದು, ಮತ್ತೊಬ್ಬರಿಗೆ ಕಳಿಸುವುದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುದಕ್ಕೆ ಶಾಶ್ವತವಾಗಿ ನಿರ್ಬಂಧಿಸಬೇಕು’ ಎಂದು ಹಿರಿಯ ವಕೀಲ ರಾಜಶೇಖರ ಎಸ್.ಹಿಲಿಯಾರು ವಾದ ಮಂಡಿಸಿದ್ದರು.

ಜಾನ್ ಡೋ (ಅಶೋಕಕುಮಾರ್) ಆದೇಶ ಎಂದರೆ, ಅಜ್ಞಾತ ಅಥವಾ ಪತ್ತೆಯಾಗದ ವ್ಯಕ್ತಿಗಳ ವಿರುದ್ಧವೂ ಜಾರಿಯಾಗುವ ಕಾನೂನು ಕ್ರಮ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮತ್ತು ಇತರ ಆನ್‌ಲೈನ್ ತಾಣಗಳಲ್ಲಿ ಅವಹೇಳನಕಾರಿ ಮತ್ತು ಅಪಪ್ರಚಾರ ಹೆಚ್ಚಿರುವ ಕಾರಣ, ಇದನ್ನು ತಡೆಯಲು ಈ ಆದೇಶ ಬಹಳ ಪ್ರಮುಖವಾಗಿದೆ.
ಈ ಆದೇಶದ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅವಹೇಳನಕಾರಿ ಅಪಪ್ರಚಾರವನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಹರಡುವುದು ನಿಷೇಧಿಸಲಾಗಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮ ಸಂಸ್ಥೆಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಯಾವುದೇ ಅವಹೇಳನಕಾರಿ ವಿಚಾರ ಹಂಚಿಕೊಂದಿದ್ದಲ್ಲಿ ತಕ್ಷಣ ಅಳಿಸಿಹಾಕುವುದು ಮತ್ತು ಮುಂದುವರಿಸಿದ್ದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಆಗುವ ಸಾಧ್ಯತೆ ಇರುತ್ತದೆ.