BELTHANGADI
ಧರ್ಮಸ್ಥಳ ಎಸ್ಐಟಿ ತನಿಖೆ – ಹಿಟಾಚಿ ಬಳಸಿ ಅಗೆದರೂ ಸಿಗದ ಕಳೆಬರ

ಬೆಳ್ತಂಗಡಿ ಸೆಪ್ಟೆಂಬರ್ 29: ಧರ್ಮಸ್ಥಳ ಎಸ್ಐಟಿ ತನಿಖೆ ಮುಂದುವರೆದಿದ್ದು, ದೂರುದಾರ ತಿಳಿಸಿದ ಜಾಗದಲ್ಲಿ ಹಿಟಾಚಿ ಬಳಸಿ ಅಗೆದರೂ ಕೂಡ ಯಾವುದೇ ಕಳೆಬರಹ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ಬಳಿ ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ 12 ಮಂದಿ ಪೌರಕಾರ್ಮಿಕರ ಸಹಾಯದಿಂದ ಆರಂಭದಲ್ಲಿ ಪಿಕ್ಕಾಸು, ಹಾರೆಯಲ್ಲಿ ಬೆಳಗ್ಗೆ 12.30 ಕ್ಕೆ ಆರಂಭವಾದ ಅಗೆಯುವ ಕೆಲಸ ಮಧ್ಯಾಹ್ನ 2.30 ರವರೆಗೆ ನಡೆಯಿತು. ಆದರೆ ಈ ವೇಳೆ ಯಾವುದೇ ರೀತಿ ಕಳೇಬರ ಅಲ್ಲೆಲ್ಲೂ ಸಿಗದ ಸಮಯದಲ್ಲಿ ದೂರುದಾರ ಮತ್ತಷ್ಟು ಅಗೆಯುವಂತೆ ಒತ್ತಾಯಿಸಿದ್ದಾನೆ. ಈ ಹಿನ್ನಲೆ ತನಿಖಾಧಿಕಾರಿ ಅನುಚೇತ್ ಸೂಚನೆಯಂತೆ ಮಿನಿ ಹಿಟಾಚಿ ಕರೆಸಲಾಯಿತು.

ಮಧ್ಯಾಹ್ನ 3.30 ರಿಂದ ಆರಂಭವಾದ ಹಿಟಾಚಿ ಕಾರ್ಯಾಚರಣೆ ಈವರೆಗೆ ನಿಂತಿಲ್ಲ. ನಿರಂತರ ಕಾರ್ಯಾಚರಣೆಯಿಂದ ಹೊಂಡದ ರೂಪವಾಗಿದೆ. ಅನಾಮಿಕ ಗುರುತಿಸಿದ ಮೊದಲ ಸ್ಥಳದಲ್ಲೇ ಕಳೇಬರ ಸಿಗದಿರುವುದು, ಜತೆಗೆ ಮಳೆಯಿಂದಾಗಿ ಹೊಂಡದಲ್ಲಿ ಒರತೆ ನೀರು ತುಂಬುತ್ತಿರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ಕಾರ್ಯಾಚರಣೆಗೆ ಇದೀಗ ಶ್ವಾನ ದಳದ ಎಂಟ್ರಿಯಾಗಿದೆ. ಕಾರ್ಮಿಕರು ಹಾಗೂ ಹಿಟಾಚಿ ಕಾರ್ಯಾಚರಣೆ ನಡೆಸಿದರೂ ಸಿಗದ ಕಳೇಬರಹ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಿಟಾಚಿ ಬಳಸಿ ಸುಮಾರು 15 ಅಡಿ ಅಗಲ 8 ಫೀಟ್ ಆಳ ಅಗೆದರೂ ಯಾವುದೇ ರೀತಿಯ ಕಳೆಬರಹ ಪತ್ತೆಯಾಗಿಲ್ಲ. ಇನ್ನೊಂದು ಕಡೆ ಭಾರೀ ಮಳೆಯಾಗುತ್ತಿರುವುದು ಕೂಡ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ.