BELTHANGADI
ಧರ್ಮಸ್ಥಳ ಪ್ರಕರಣ – ಮಾಸ್ಕ್ ಮ್ಯಾನ್ ಹೇಳಿದ ಜಾಗಗಳಲ್ಲಿ ಅಗೆಯುವ ಪ್ರಕ್ರಿಯೆ ಪ್ರಾರಂಭ

ಬೆಳ್ತಂಗಡಿ ಜುಲೈ 29: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ನಿನ್ನೆ ಗುರುತಿಸಿರುವ ಸ್ಥಳಗಳಲ್ಲಿ ಇಂದು ಶವಗಳಿಗಾಗಿ ಅಗೆಯುವ ಕಾರ್ಯ ಪ್ರಾರಂಭವಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಪ್ರಮುಖ ಘಟ್ಟ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದಾರೆ. ಇನ್ನುಳಿದ ಜಾಗಗಳನ್ನೂ ಇಂದು ಗುರುತಿಸಲಿದ್ದು, ಬಳಿಕ ಗುರುತಿಸಿರೋ ಜಾಗಗಳನ್ನು ಅಗೆಯಲು ಎಸ್‌ಐಟಿ ತೀರ್ಮಾನಿಸಿದೆ.
ನಿನ್ನೆ ದೂರುದಾರ ಗುರುತಿಸಿರುವ ಸ್ಥಳಗಳಿಗೆ ಇಂದು ಮತ್ತೆ ಆಗಮಿಸಿರುವ ಎಸ್ಐಟಿ, ಗುರುತು ಮಾಡಿರುವ ಸ್ಥಳಗಳನ್ನು ಅಗೆಯಲು ಕಾರ್ಮಿಕರನ್ನು ಕರೆಸಿದೆ. ಈಗಾಗಲೇ ಕಾರ್ಮಿಕರು ಹಾರೆ, ಪಿಕ್ಕಾಸು ಸಹಿತ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು, ಅಗೆಯುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.
ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ. ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ನೇತೃತ್ವದ ತಂಡವನ್ನು ಎಸ್.ಐ.ಟಿ ಸ್ಥಳಕ್ಕೆ ಕರೆಯಿಸಿದೆ.
ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪೊಲೀಸರು ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಲಾಗಿದೆ.