BELTHANGADI
ನ್ಯಾಯಾಂಗದಲ್ಲಿ ಕಲ್ಲರಳಿ ಹೂವಾದ ಧರ್ಮಸ್ಥಳದ ಕುಮಾರಿ ಚೇತನಾ..!
ಬೆಳ್ತಂಗಡಿ, ಫೆಬ್ರವರಿ 26 : ಕರ್ನಾಟಕ ಉಚ್ಚ ನ್ಯಾಯಾಲಯದ 2020 ನೇ ಸಾಲಿನಲ್ಲಿ ಕರೆಯಲಾದ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಧರ್ಮಸ್ಥಳದ ಕುಮಾರಿ ಚೇತನಾ ಅವರು ಉತ್ತೀರ್ಣರಾಗಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುತ್ತಾರೆ.
ಕಡು ಬಡತನದಲ್ಲಿ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಕುಮಾರಿ ಚೇತನಾ ಮಾಡಿರುವ ಈ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನಾರ್ಯ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಗೆ ನಾಲ್ಕು ಜನ ಮಕ್ಕಳಲ್ಲಿ ಎರಡನೆಯರಾಗಿ ಹುಟ್ಟಿದ ಚೇತನಾ ಅವರು ಸವೆದ ಹಾದಿ ಮಾತ್ರ ಕಠಿಣವಾದುದು.
ತಮ್ಮ 1-6 ತರಗತಿ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸಮೀಪದ ಸರ್ಕಾರಿ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುಗಿಸಿ, ಏಳನೇ ತರಗತಿ ಶಿಕ್ಷಣವನ್ನು ತಮ್ಮ ಊರಿನ ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ಪ್ರೌಡ ಶಿಕ್ಷಣವನ್ನು ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಸೆಕೆಂಡರಿ ಶಾಲೆ ಧರ್ಮಸ್ಥಳದಲ್ಲಿ ಪಡೆದರು. ಮುಂದಿನ ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿ, ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ 2016ನೇ ಇಸವಿಯಲ್ಲಿ ಮುಗಿಸಿದರು.
ಕಾನೂನು ವಿದ್ಯಾಭ್ಯಾಸದ ನಂತರ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲ್ ರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ರವರ ಲಾ ಕ್ಲಾರ್ಕ್ ರೀಸರ್ಚ್ ಅಸಿಸ್ಟಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಕೆಳೆದ ಒಂದು ವರ್ಷಗಳಿಂದ ನ್ಯಾಯವಾದಿ ಶ್ರೀಯುತ ಶಿವಪ್ರಸಾದ್ ಶಾಂತನಗೌಡರ್ ರವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು. ಇದೀಗ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕುಮಾರಿ ಚೇತನಾ ಅವರಿಗೆ ಆಲ್ ದಿ ಬೆಸ್ಟ್ ಹೇಳೋನಾ…