FILM
ಐಶ್ವರ್ಯ ರೈ ಮಗಳಿಗೆ ಹೈಕೋರ್ಟ್ ನಲ್ಲಿ ಗೆಲವು..ಯೂಟ್ಯೂಬ್ ಚಾನೆಲ್ ಗಳಿಗೆ ನಿರ್ಬಂಧ ಹೇರಿದ ಹೈಕೋರ್ಟ್
ದೆಹಲಿ ಎಪ್ರಿಲ್ 20: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ಆರೋಗ್ಯದ ಕುರಿತಂತೆ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಯೂಟ್ಯೂಬ್ ಚಾನೆಲ್ ಗಳ ಮೇಲೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದ್ದು, ‘ಇದು ಸಮಾಜದಲ್ಲಿ ಬೇರೂರುತ್ತಿರುವ ರೋಗಗ್ರಸ್ತ ವಿಕೃತ ಮನಸ್ಥಿತಿಗೆ ಹಿಡಿದ ಕೈಗನ್ನಡಿ’ ಎಂದು ವ್ಯಾಖ್ಯಾನಿಸಿದೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯಳ ಆರೋಗ್ಯ ಕುರಿತು ಆಧಾರರಹಿತ ವದಂತಿ ಹಬ್ಬಿಸುತ್ತಿರುವ ಆಕ್ಷೇಪಾರ್ಹ ವಿಡಿಯೊಗಳನ್ನು ತಕ್ಷಣವೇ ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಗೂಗಲ್ ಸಂಸ್ಥೆಗೆ ತಾಕೀತು ಮಾಡಿದೆ.
ವೀಕ್ಷಕರಿಂದ ಹೆಚ್ಚಿನ ವೀವ್ಸ್ ಪಡೆಯಲು ಪೈಪೋಟಿಗೆ ಬಿದ್ದಿರುವ ಕೆಲವು ಯೂಟ್ಯೂಬ್ ಚಾಲನೆಗಳು ಆರಾಧ್ಯಳ ಆರೋಗ್ಯ ತೀವ್ರ ಹದಗೆಟ್ಟಿದೆ. ಆಕೆ ಮೃತಪಟ್ಟಿದ್ದಾಳೆ ಎಂದು ಸುದ್ದಿ ಪ್ರಸಾರ ಮಾಡುತ್ತಿದ್ದವು. ಇದರಿಂದ ಬಚ್ಚನ್ ಕುಟುಂಬ ಕಸಿವಿಸಿಗೊಂಡಿತ್ತು. ಇಂಥ ಚಾನೆಲ್‌ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕೋರಿ 11 ವರ್ಷದ ಆರಾಧ್ಯ ಹಾಗೂ ಅಭಿಷೇಕ್ ಬಚ್ಚನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಹರಿಶಂಕರ್, ‘ಪ್ರತಿ ಮಗುವನ್ನೂ ಗೌರವಿಸುವುದು ಎಲ್ಲರ ಜವಾಬ್ದಾರಿ. ಮಗುವಿನ ಆರೋಗ್ಯ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡುವುದು ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟರು. ಇನ್ನು ಮುಂದೆ ಆರಾಧ್ಯಳ ಆರೋಗ್ಯದ ಬಗ್ಗೆ ಯಾವುದೇ ಯೂಟ್ಯೂಬ್ ಚಾನೆಲ್‌ಗಳು ವಿಡಿಯೊ ಸಿದ್ಧಪಡಿಸಬಾರದು. ಅವುಗಳನ್ನು ಪ್ರಸಾರ ಮಾಡಬಾರದು. ಮಗುವಿನ ಹಿತಾಸಕ್ತಿ ರಕ್ಷಣೆ ಸಂಬಂಧ ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದು ಹೇಳಿದೆ.