KARNATAKA
ಯುಟ್ಯೂಬರ್ ಸಮೀರ್ ಎಂ ಡಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ

ಬೆಂಗಳೂರು ಎಪ್ರಿಲ್ 11: ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದ ಯುಟ್ಯೂಬರ್ ಎಂ ಡಿ ಸಮೀರ್ ವಿರುದ್ಧ ಡಿ. ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ 10 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳವನ್ನು ಗುರಿಯಾಗಿಸಿ ವಿಡಿಯೋ ಮಾಡಿದ್ದು, ನ್ಯಾಯಾಲಯದ ಆದೇಶ ಇದ್ದರೂ ವಿಡಿಯೋ ಡಿಲೀಟ್ ಮಾಡಿಲ್ಲ ಎಂದು ಧರ್ಮಸ್ಥಳದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ 10 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ ಈ ಮಾನನಷ್ಟ ಮೊಕದ್ದಮೆ ಅರ್ಜಿ ಪರಿಶೀಲಿಸಿದ ಬಳಿಕ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶರಾದ ಎಸ್. ನಟರಾಜ್ ಅವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ವಾದ ಆಲಿಸಿದ ಬಳಿಕ ನ್ಯಾಯಾಲಯ, ಯೂಟ್ಯೂಬರ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಅಲ್ಲದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೋ ತಕ್ಷಣ ಡಿಲೀಟ್ ಮಾಡಲು ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರ ಪರ ರಾಜಶೇಖರ ಹಿಲ್ಯಾರ್ ವಾದ ಮಂಡಿಸಿ, ‘ಯುಟ್ಯೂಬರ್ ಸಮೀರ್ ಎಂ.ಡಿ. ಎಂಬಾತ ಹರಿಬಿಟ್ಟ ವಿಡಿಯೋದ ವಿರುದ್ಧ ನ್ಯಾಯಾಲಯವು ವಿಡಿಯೋ ತೆಗೆದು ಹಾಕುವಂತೆ ಮತ್ತು ಈ ಕುರಿತು ಮತ್ತೆ ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಅದೇಶವನ್ನು ಉಲ್ಲಂಘಿಸಿ, ಎರಡನೇ ವಿಡಿಯೋ ಬಿಟ್ಟದ್ದ ಸಮೀರ್ ಎಂಬ ವ್ಯಕ್ತಿ ಹಾಗೂ ಯೂಟ್ಯೂಬ್ ಚಾನಲ್ ದೂತದ ಮೇಲೆ ಮಾನನಷ್ಟ ಮೊಕದ್ದಮೆ ಕಾಯಿದೆಯಡಿ ಕ್ರಮ ಮುಂದುವರಿಸಬೇಕು,’ ಎಂದು ಕೋರಿದರು.
1 Comment