LATEST NEWS
ಮೊಯಿದಿನ್ ಬಾವಾರನ್ನು ತರಾಟೆಗೆ ತೆಗೆದುಕೊಂಡ ದೀಪಕ್ ರಾವ್ ಕುಟುಂಬ
ಮೊಯಿದಿನ್ ಬಾವಾರನ್ನು ತರಾಟೆಗೆ ತೆಗೆದುಕೊಂಡ ದೀಪಕ್ ರಾವ್ ಕುಟುಂಬ
ಮಂಗಳೂರು, ಜನವರಿ 5: ಸುರತ್ಕಲ್ ನ ಕಾಟಿಪಳ್ಳದಲ್ಲಿ ಹತ್ಯೆಗೊಳಗಾದ ದೀಪಕ್ ರಾವ್ ಮನೆಗೆ 5 ಲಕ್ಷದ ಚೆಕ್ ಹಿಡಿದುಕೊಂಡು ಹೋಗಿದ್ದ ಸ್ಥಳೀಯ ಶಾಸಕ ಮೊಯಿದೀನ್ ಬಾವಾರಿಗೆ ಮನೆ ಮಂದಿ ಮಂಗಳಾರತಿ ಮಾಡಿ ಕಳುಹಿಸಿದ ಘಟನೆ ನಡೆದಿದೆ. ಘಟನೆ ನಡೆದ ಎರಡನೇ ದಿನ ಕಾರ್ಪೋರೇಟರ್ ಪ್ರತಿಮಾ ಕುಳಾಯಿ, ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ಹಾಗೂ ಮಾಧ್ಯಮ ಪ್ರತಿನಿಧಿಗಳ ಜೊತೆ ದೀಪಕ್ ಮನೆಗೆ ತೆರಳಿದ್ದ ಶಾಸಕರಿಗೆ ಮನೆ ಮಂದಿ ಹಾಗೂ ಸ್ಥಳದಲ್ಲಿದ್ದ ಸ್ಥಳೀಯರು ಮಾತಿನ ತಪರಾಕಿ ನೀಡಿದ್ದಾರೆ.
ಕೊಲೆಗಾರರ ಜೊತೆ ಫೋಟೋ ತೆಗೆಸಿಕೊಂಡಿರುವ ಶಾಸಕರ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದನ್ನು ಗಮನಿಸಿದ ಮನೆ ಮಂದಿ ದೀಪಕ್ ಕೊಲೆಗಾರರೊಂದಿಗೆ ಶಾಸಕರ ಸಂಬಂಧವೇನು ಎನ್ನುವುದನ್ನು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ದೀಪಕ್ ಮೃತದೇಹವನ್ನು ಮನೆಯವರಿಗೂ ತಿಳಿಸದೆ ಮಂಗಳೂರಿನ ಎ.ಜೆ. ಆಸ್ಪತ್ರೆಯಿಂದ ಪೋಲೀಸರೇ ಅನಾಥ ಶವದ ರೀತಿಯಲ್ಲಿ ಕರೆ ತಂದಿರುವ ಹಿಂದೆಯೂ ಶಾಸಕರ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ ಸ್ಥಳೀಯರು ಶಾಸಕರು ತನ್ನ ವೈಯುಕ್ತಿಕ ನೆಲೆಯಲ್ಲಿ ತಂದ 5 ಲಕ್ಷ ರೂಪಾಯಿಗಳ ಚೆಕ್ಕನ್ನು ತಿರಸ್ಕರಿಸಿದ್ದಾರೆ.
ದೀಪಕ್ ತಮ್ಮ ಸತೀಶ್ ಬಾಯಿ ಬರದಿದ್ದರೂ, ತನ್ನ ಆಕ್ರೋಶವನ್ನು ಶಾಸಕರ ಮೇಲೆ ತೀರಿಸಿದ್ದು, ತನ್ನನ್ನು ಅಪ್ಪಿಕೊಳ್ಳಲು ಯತ್ನಿಸಿದ್ದ ಶಾಸಕರನ್ನು ದೂರ ತಳ್ಳಿದ್ದಾರೆ. ಅಲ್ಲದೆ ಚೆಕ್ಕನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಸಹ್ನೆಯ ಮೂಲಕವೇ ತಿಳಿಸಿದ್ದಾರೆ. ಮಾಧ್ಯಮಗಳ ಮುಂದೆಯೇ ತನ್ನ ಮಾನ ಹರಾಜಾಗುತ್ತಿರುವುದನ್ನು ಮನಗಂಡ ಶಾಸಕರಾದಿಯಾಗಿ ಜನಪ್ರತಿನಿಧಿಗಳ ತಂಡ ಮನೆಯಿಂದ ಹೊರ ನಡೆದಿದೆ.
ಶಾಸಕರ ಜೊತೆಗೆ ಸ್ಥಳೀಯ ಕಾರ್ಪೋರೇಟರ್ ಆಗಿರುವ ಪ್ರತಿಭಾ ಕುಳಾಯಿ ಅವರನ್ನೂ ತರಾಟೆಗೆ ತೆಗೆದುಕೊಂಡ ಸ್ಥಳೀಯರು ಅಂತ್ಯಸಂಸ್ಕಾರದ ವೇಳೆ ಬರಲಿಕ್ಕಾಗದವರು ಇಂದು ಬಂದು ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆಯಿಲ್ಲ ಎಂದು ಖಂಡಾತುಂಡವಾಗಿ ಹೇಳಿದ್ದಾರೆ. ಪ್ರಮುಖ ಆರೋಪಿ ಜೊತೆಗೆ ತಾನಿದ್ದ ಫೋಟೋ ಇದೀಗ ಶಾಸಕ ಮೊಯಿದೀನ್ ಬಾವಾ ಅವರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ. ಮನೆಯಿಂದ ಹೊರ ಬಂದ ಶಾಸಕರು ಮಾಧ್ಯಮದ ಮುಂದೆ ಬಂದು ಮನೆ ಮಂದಿ ತನ್ನ ವೈಯುಕ್ತಿಕ ಧನ ಸಹಾಯವನ್ನು ಸ್ವೀಕರಿಸದಿರಲು ಹಿಂದೂ ಸಂಘಟನೆಗಳೇ ಕಾರಣ ಎನ್ನುವ ಆರೋಪವನ್ನೂ ಮಾಡಿದ್ದಾರೆ.