DAKSHINA KANNADA
ವಿದ್ಯಾರ್ಥಿನಿ ಸಾವು, ಪರಿಹಾರಕ್ಕೆ ಒತ್ತಾಯಿಸಿ ಮಿನಿ ವಿಧಾನ ಸೌಧದ ಮುಂದೆ ಶವವಿಟ್ಟು ಪ್ರತಿಭಟನೆಗೆ ಕುಟಂಬಸ್ಥರ ತೀರ್ಮಾನ.
ವಿದ್ಯಾರ್ಥಿನಿ ಸಾವು, ಪರಿಹಾರಕ್ಕೆ ಒತ್ತಾಯಿಸಿ ಮಿನಿ ವಿಧಾನ ಸೌಧದ ಮುಂದೆ ಶವವಿಟ್ಟು ಪ್ರತಿಭಟನೆಗೆ ಕುಟಂಬಸ್ಥರ ತೀರ್ಮಾನ.
ಪುತ್ತೂರು,ನವಂಬರ್ 17: ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿಯೋರ್ವಳು ಸಾವಿಗೀಡಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕಬಕ ಎಂಬಲ್ಲಿ ನಡೆದಿದೆ. ಪೂಜಾ ಹೆಸರಿನ ಈ ವಿದ್ಯಾರ್ಥಿನಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ದಿನಗಳ ಹಿಂದೆ ಈಕೆ ಡಯಾಲಿಸೀಸ್ ಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತೆರಳಿದ ಹಿನ್ನಲೆಯಲ್ಲಿ ವೈದ್ಯರ ತಪಾಸಣೆಯ ಬಳಿಕ ಡಯಾಲಿಸೀಸ್ ನಡೆಸುವಂತೆ ವೈದ್ಯರು ತಿಳಿಸಿದ್ದರು. ಆದರೆ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಪೂಜಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈ ನಡುವೆ ಗುರುವಾರ ಪೂಜಾಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಆಕೆ ಕೊನೆಯುಸಿರೆಳೆದಿದ್ದಳು. ಈ ಹಿನ್ನಲೆಯಲ್ಲಿ ಆಕೆಯ ಕಬಕದ ವಿದ್ಯಾಪುರದ ಮನೆಯಲ್ಲಿ ನೀರವ ಮೌನ ಮನೆ ಮಾಡಿದೆ. ನೂರಾರು ಸಂಖ್ಯೆಯಲ್ಲಿ ಜನ ಪೂಜಾಳ ಮನೆಯಲ್ಲಿ ಜಮಾಯಿಸುತ್ತಿದ್ದರೂ, ಸ್ಥಳೀಯ ರೆವೆನ್ಯೂ ಅಧಿಕಾರಿಗಳ ಮಾತ್ರ ಈಕೆಯ ಮನೆಯ ಹತ್ತಿರ ಸುಳಿದಾಡಿಲ್ಲ. ಸರಕಾರದ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎನ್ನುವ ಆರೋಪ ಕುಟುಂಬ ಸದಸ್ಯರದ್ದಾಗಿದ್ದು, ಸರಕಾರವೇ ಈ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಅಧಿಕಾರಿಗಳು ಕೂಡಲೇ ಪೂಜಾಳ ಮನೆಗೆ ತೆರಳಿ ಆಕೆಯ ಸಾವು ವೈದ್ಯರ ಮುಷ್ಕರದ ಕಾರಣದಿಂದಲೇ ಸಂಭವಿಸಿದೆ ಎನ್ನುವ ವರದಿಯನ್ನು ಸರಕಾರಕ್ಕೆ ಸಲ್ಲಿಸಬೇಕು.ಇಲ್ಲದೇ ಹೋದಲ್ಲಿ ಪೂಜಾಳ ಶವವನ್ನು ಪುತ್ತೂರು ಮಿನಿ ವಿಧಾನಸೌಧದ ಮುಂದೆ ಇಟ್ಟು ಪ್ರತಿಭಟನೆ ನಡೆಸುವ ಚಿಂತನೆ ನಡೆಸಿದ್ದಾರೆ.