LATEST NEWS
ಪತ್ನಿಯಿಂದ ಕೊಲೆಯಾದ ಮಹಮ್ಮದ್ ಸಮೀರ್ ಮೃತ ದೇಹ ಮಂಗಳೂರಿಗೆ

ಪತ್ನಿಯಿಂದ ಕೊಲೆಯಾದ ಮಹಮ್ಮದ್ ಸಮೀರ್ ಮೃತ ದೇಹ ಮಂಗಳೂರಿಗೆ
ಮಂಗಳೂರು ಸೆಪ್ಟೆಂಬರ್ 25: ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ತಮಿಳುನಾಡಿನಲ್ಲಿ ಕೊಲೆಯಾದ ಮಂಗಳೂರಿನ ಮಹಮ್ಮದ್ ಸಮೀರ್ ಅವರ ಮೃತ ದೇಹ ಇಂದು ಮಂಗಳೂರಿಗೆ ತರಲಾಗಿದೆ.
ಸಮೀರ್ ಅವರ ಸ್ವಗ್ರಾಮ ಮಂಗಳೂರಿನ ಗಂಜಿಮಠ ಮಸೀದಿಗೆ ಮೃತದೇಹ ತರಲಾಗಿದ್ದು, ಧಾರ್ಮಿಕ ವಿಧಿವಿಧಾನಗಳ ಬಳಿಕ ದಫನ ಮಾಡಲಾಯಿತು. ಗಂಡ ಸಮೀರ್ ನನ್ನು ಕೊಲೆ ಗೈದ ಬಳಿಕ ಅತನ ಪತ್ನಿ ಫಿರ್ದೋಸ್ ಮತ್ತು ಆಕೆಯ ಪ್ರಿಯಕರ ನಾಪತ್ತೆಯಾಗಿದ್ದು, ವಿದೇಶಕ್ಕೆ ಪಲಾಯಾನ ಮಾಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಅವರು ಹಾಂಕಾಂಗ್ ನಲ್ಲಿದ್ದಾರೆ ಎಂದು ತಿಳಿದು ಬಂದಿದ್ದು. ಫಿರ್ದೋಸ್ ಮೂರು ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ. ಮಂಗಳೂರಿನ ಗಂಜಿಮಠ ನಿವಾಸಿ ಮಹಮ್ಮದ್ ಸಮೀರ್ ನಾಪತ್ತೆಯಾದ ಬಗ್ಗೆ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ಇತ್ತೀಚೆಗೆ ಕೇಸು ದಾಖಲಾಗಿತ್ತು.
ಬೆಂಗಳೂರಿಗೆ ಪತ್ನಿ ಫಿರ್ದೌಸ್ ಮತ್ತು ಮಗುವಿನ ಜೊತೆ ತೆರಳಿದ್ದ ಸಮೀರ್ ನಾಪತ್ತೆ ಆಗಿದ್ದಾನೆಂದು ಆತನ ತಂದೆ ದೂರು ನೀಡಿದ್ದರು. ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರು, ಮಹಮ್ಮದ್ ಸಮೀರ್ ನನ್ನು ತಮಿಳುನಾಡಿನ ಕೃಷ್ಣಗಿರಿ ಎಂಬಲ್ಲಿ ಕೊಲೆಗೈದಿರುವುದನ್ನು ಪತ್ತೆಹಚ್ಚಿದ್ದರು.
ಇದೇ ವೇಳೆ ಬೆಂಗಳೂರಿಗೆ ತೆರಳಿದ್ದ ಪತ್ನಿ ಫಿರ್ದೌಸ್ ಸೆಪ್ಟೆಂಬರ್ 19 ರಂದು ಕಾಪುವಿನ ತವರು ಮನೆಗೆ ಆಗಮಿಸಿದ್ದು ಮರುದಿನ ಮೂರು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದಳು. ಹೀಗಾಗಿ ಕಾಪು ಪೊಲೀಸ್ ಠಾಣೆಯಲ್ಲಿ ಮನೆಯವರು ಫಿರ್ದೌಸ್ ನಾಪತ್ತೆ ಬಗ್ಗೆ ಕೇಸು ದಾಖಲಾಗಿತ್ತು. ಪತ್ನಿಯ ನಾಪತ್ತೆಯಿಂದಾಗಿ ಕೊಲೆಯ ಹಿಂದೆ ಆಕೆಯ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು.