LATEST NEWS
ಆಸ್ಪತ್ರೆ ಯಡವಟ್ಟು ಮೃತ ವ್ಯಕ್ತಿಯ ಶವ ಅದಲು ಬದಲು
ಉಡುಪಿ ಅಗಸ್ಟ್ 23: ಆಸ್ಪತ್ರೆಗಳಲ್ಲಿ ನವಜಾತ ಶಿಶು ಅದಲು ಬದಲಾಗುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಆದರೆ ಉಡುಪಿಯಲ್ಲಿ ಮೃತ ವ್ಯಕ್ತಿಯ ಶವವೇ ಅದಲು ಬದಲಾಗಿರುವ ಘಟನೆ ನಡೆದಿದೆ. ಶವ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಿದಾಗಲೇ ತಿಳಿದಿದ್ದು, ಅದು ಬೆರೆ ವ್ಯಕ್ತಿಯ ಶವ ಎಂದು.
ಕೋಟೇಶ್ವರ ನೇರಂಬಳ್ಳಿಯ ಗಂಗಾಧರ ಆಚಾರ್ಯ ಅವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಅವರ ದೇಹವನ್ನು ಕೊರೊನಾ ನಿಯಮಾವಳಿ ಪ್ರಕಾರವಾಗಿ ಸಂಪೂರ್ಣವಾಗಿ ಪ್ಯಾಕ್ ಮಾಡಿ ಆಂಬುಲೆನ್ಸ್ ಮೂಲಕ ಹಳೇಕೋಟೆ ಸ್ಮಶಾನಕ್ಕೆ ತರಲಾಗಿತ್ತು. ದೇಹವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಾರಣ ಕುಟುಂಬದವರಿಗೆ ಮೃತದೇಹದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕಾರ್ಕಳ ತಾಲೂಕಿನ ಪ್ರಕಾಶ್ ಆಚಾರ್ಯ ಜಾಂಡಿಸ್ ನಿಂದ ಬಳಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು. ಎರಡು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಕುಂದಾಪುರಕ್ಕೆ ಗಂಗಾಧರ್ ಆಚಾರ್ಯ ಅವರ ಮೃತದೇಹವನ್ನು ಸಾಗಿಸುವ ಬದಲು ಪ್ರಕಾಶ್ ಆಚಾರ್ಯ ಮೃತದೇಹ ಸಾಗಿಸಿದ್ದಾರೆ.
ಕುಂದಾಪುರ ಸಂಗಮ್ ಬಳಿ ರುದ್ರ ಭೂಮಿಯಲ್ಲಿ ಸಂಸ್ಕಾರ ಕ್ಕೆ ಮುಂದಾದಾಗ ಶವ ಬದಲಾಗಿರುವುದು ಪತ್ತೆಯಾಗಿದೆ. 65 ವರ್ಷದ ಗಂಗಾಧರ್ ಆಚಾರ್ಯರ ಶವದ ಬದಲಾಗಿ ಓರ್ವ ಯುವಕನ ಮೃತದೇಹವು ಕುಟುಂಬಕ್ಕೆ ಅಂತಿಮ ಸಂಸ್ಕಾರ ನಡೆಸಲು ನೀಡಲಾಗಿತ್ತು. ತಪ್ಪಾಗಿ ಬೇರೆಯೇ ಮೃತದೇಹ ನೀಡಿದ ಕಾರಣಕ್ಕಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರು ಆಂಬುಲೆನ್ಸ್ ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದು ಸ್ಥಳದಲ್ಲೇ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೋಲಿಸರು ಆಗಮಿಸಿ ಸ್ಥಳೀಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಮಧ್ಯಾಹ್ನ ಆಗುವಷ್ಟರಲ್ಲಿ ಗಂಗಾಧರ ಅವರ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ತರಲಾಗಿದ್ದು ಮೃತ ಯುವಕನ ಮೃತದೇಹವನ್ನು ವಾಪಾಸ್ ತೆಗೆದುಕೊಂಡು ಹೋಗಲಾಗಿದೆ.
ಇಷ್ಟಾಗುವಾಗ ಕಾರ್ಕಳದ ಪ್ರಕಾಶ್ ಆಚಾರ್ಯ ಕುಟುಂಬ ಉಡುಪಿ ಜಿಲ್ಲಾ ಆಸ್ಪತ್ರೆಗೆ ಬಂದಿದೆ. ಜಿಲ್ಲಾ ಆಸ್ಪತ್ರೆಯಿಂದ ನಮ್ಮ ಮೃತದೇಹ ಕಾಣೆಯಾಗಿದೆ ಎಂದು ವೈದ್ಯರ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ಪ್ರಕಾಶ್ ಸೋದರ ರವಿ ಮಾತನಾಡಿ, ಇಂತಹ ಗೊಂದಲ ಮತ್ತೆ ಆಗದಿರಲಿ ಎಂದು ಹೇಳಿದರು.
ಬದಲಾದ ಮೃತದೇಹಗಳನ್ನು ಆಯಾಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಂದಾಪುರದ ಗಂಗಾಧರ್ ಆಚಾರ್ಯ ಕುಟುಂಬ ಶವ ರವಾನೆ ಸಂದರ್ಭ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಕುಟುಂಬಿಕರು ಬಾರದಿರುವುದು ತಪ್ಪು ಎಂದು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಮಧುಸೂದನ ಸ್ಪಷ್ಟನೆ ಕೊಟ್ಟಿದ್ದಾರೆ. ಪರಿಶೀಲಿಸದೆ ಮೃತದೇಹ ರವಾನಿಸಿದವರಿಗೆ ಕಾರಣ ಕೇಳಿ ನೋಟಿಸ್ ಕೊಡುವುದಾಗಿ ಹೇಳಿದ್ದಾರೆ.