LATEST NEWS
ಸೈಂಟ್ ಮೇರಿಸ್ ದ್ವೀಪದಲ್ಲಿರುವ ಖಾಸಗಿ ರೆಸ್ಟೋರೆಂಟ್ ಬಂದ್ ಮಾಡಲು ಉಡುಪಿ ಜಿಲ್ಲಾಧಿಕಾರಿ ಆದೇಶ
ಸೈಂಟ್ ಮೇರಿಸ್ ದ್ವೀಪದಲ್ಲಿರುವ ಖಾಸಗಿ ರೆಸ್ಟೋರೆಂಟ್ ಬಂದ್ ಮಾಡಲು ಉಡುಪಿ ಜಿಲ್ಲಾಧಿಕಾರಿ ಆದೇಶ
ಉಡುಪಿ, ಜುಲೈ 18: ಉಡುಪಿಯ ಮಲ್ಪೆ ಸಮೀಪ ಇರುವ ಸೈಂಟ್ ಮೇರೀಸ್ ದ್ವೀಪದಲ್ಲಿ ರುವ ಖಾಸಗಿ ರೆಸ್ಟೋರೆಂಟನ್ನು ತಕ್ಷಣವೇ ಬಂದ್ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶಿಸಿದ್ದಾರೆ.
ಸೈಂಟ್ ಮೇರೀಸ್ ದ್ವೀಪವನ್ನು ರಾಷ್ಟ್ರೀಯ ಭೌಗೋಳಿಕ ಸ್ಮಾರಕವೆಂದು ಗುರುತಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ನೈಸರ್ಗಿಕ ಸ್ಮಾರಕ ಕರಾವಳಿ ನಿಯಂತ್ರಣ ವಲಯದಲ್ಲಿ ಸಿಆರ್‌ಝಡ್-1ಕ್ಕೆ ಸೇರಿರುವ ಕಾರಣ ಇವುಗಳು ಸಂರಕ್ಷಿಸಲೇ ಬೇಕಾದ ತಾಣಗಳಾಗಿವೆ. ಇಂತಹ ರಾಷ್ಟ್ರೀಯ ಸ್ಮಾರಕಗಳಲ್ಲಿ ಖಾಸಗಿ ಸಂಸ್ಥೆಯವರು ರೆಸ್ಟೋರೆಂಟ್ ಮತ್ತು ಇತರೆ ಸಿಆರ್‌ಝಡ್ ಅಧಿಸೂಚನೆಯಲ್ಲಿ ನಿಷೇಧಿಸಿರುವ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಕಾರ್ಯದರ್ಶಿಯವರ ಪತ್ರವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಅಲ್ಲದೇ ಸೈಂಟ್ ಮೇರಿಸ್ ದ್ಪೀಪದಲ್ಲಿ ಯಾವುದೇ ಮಾರಾಟ ಮಳಿಗೆಗಳನ್ನು ಅಲ್ಲಿ ತೆರೆಯದೇ ಇರುವಂತೆ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ-2011ನ್ನು ಉಲ್ಲಂಘಿಸಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ದ್ವೀಪದಲ್ಲಿ ನಡೆಸದೇ ಇರುವಂತೆ ಹಾಗೂ ಪೂರ್ವಾನು ಮತಿಯನ್ನು ಪಡೆಯದೇ ಯಾವುದೇ ಕಾರ್ಯ ಚಟುವಟಿಕೆಗಳನ್ನು ಅಲ್ಲಿ ನಡೆಸದೇ ಇರುವಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಕಳೆದ ವಾರ ‘ಇಕೋ ಸ್ಮಾರ್ಟ್ ಕೋಸ್ಟಲ್ ವಿಲೇಜ್’ ಯೋಜನೆಗೆ ಸಂಬಂಧಿಸಿ ಕರಾವಳಿ ತೀರ ಪ್ರದೇಶದ ಸೂಕ್ತ ಗ್ರಾಮಗಳನ್ನು ಆಯ್ಕೆ ಮಾಡಲು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ (ಜೀವಿ ಪರಿಸ್ಥಿತಿ ಮತ್ತು ಪರಿಸರ) ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಈ ಪ್ರಕರಣದ ಬಗ್ಗೆ ಪ್ರಸ್ತಾಪವಾಗಿ ಸಿಆರ್‌ಝಡ್ ನಿಯಮವನ್ನು ಉಲ್ಲಂಘಿಸಿ ದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸೈಂಟ್ ಮೇರೀಸ್ ದ್ವೀಪದಲ್ಲಿ ಈಗಾಗಲೇ ಇರುವಂತಹ ಮೂಲಭೂತ ಸೌಕರ್ಯ ಸೌಲಭ್ಯ, ಜೀವರಕ್ಷೆ ಸುರಕ್ಷತೆಗಾಗಿ ಇರುವ ವಿವಿಧ ಸೌಕರ್ಯಗಳು, ಶೌಚಾಲಯ ಹಾಗೂ ಇತರೆ ಸೌಲಭ್ಯಗಳನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳದಿರಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.