LATEST NEWS
ಉಡುಪಿ ಜಿಲ್ಲೆಯ ದೇವಸ್ಥಾನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಜಿಲ್ಲಾಧಿಕಾರಿ ಅವಕಾಶ

ಉಡುಪಿ ಅಕ್ಟೋಬರ್ 8: ಉಡುಪಿ ಜಿಲ್ಲೆಯ ದೇವಸ್ಥಾನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದಾರೆ. ಆದರೆ ಈ ಹಿಂದೆ ದೇವಾಲಯಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಿದ್ದಲ್ಲಿ ಮಾತ್ರ ಮುಂದುವರಿಸಿಕೊಂಡು ಹೋಗಬಹುದಾಗಿದ್ದು, ಹೊಸದಾಗಿ ಪ್ರಾರಂಭಿಸುವುದನ್ನು ತಪ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಜೊತೆಗೆ ಕೋವಿಡ್ ನಿಯಮಗಳನ್ನು ಕಠಿಣವಾಗಿ ಪಾಲಿಸುವಂತೆ ಎಚ್ಚರಿಸಿದ್ದಾರೆ. ನವರಾತ್ರಿ-ದೀಪಾವಳಿ ಸೇರಿದಂತೆ ಇನ್ನಿತರ ಜಾತ್ರಾ ಮಹೋತ್ಸವಗಳಲ್ಲಿ ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆಯನ್ನು ನೀಡಿದ್ದಾರೆ.

ದೇವಾಲಯಗಳಿಗೆ ಬರುವ ಭಕ್ತಾಧಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ 6 ಅಡಿ ಅಂತರದ ಬಾಕ್ಸ್ ಮಾರ್ಕ್‍ಗಳನ್ನು ಹಾಕಬೇಕು. ಪ್ರತಿಯೊಬ್ಬ ಭಕ್ತಾಧಿಗಳು ಮುಖಗವಸು ಧರಿಸಲೇ ಬೇಕು. ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈ ತೊಳೆಯುವಿಕೆ ಅಥವಾ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯವಾಗಿ ಮಾಡುವಂತೆ ನೋಡಿಕೊಳ್ಳಬೇಕು.
ರಜಾದಿನಗಳಲ್ಲಿ ಹಬ್ಬಕ್ಕೆ ಹೆಚ್ಚು ಜನರು ಬರುವ ಸಾಧ್ಯತೆ ಇರುವ ಹಿನ್ನಲೆ ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಾಯ ಪಡೆಯಬೇಕು ಎಂದಿದ್ದಾರೆ. ದೇವಾಲಯಗಳಲ್ಲಿ ಜಾತ್ರಾ ಉತ್ಸವಗಳು, ಬ್ರಹ್ಮಕಲಶೋತ್ಸೋವ, ಪವಿತ್ರೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಉತ್ಸವಗಳನ್ನು ನಿಲ್ಲಿಸಲು ಸಂಪ್ರದಾಯದ ಅಡ್ಡಿಯಾದರೆ, ತಂತ್ರಿಗಳು, ಆರ್ಚಕರು, ಸಿಬ್ಬಂದಿಯವರು ಸಾಂಕೇತಿಕವಾಗಿ ಒಳಪ್ರಕಾರದೊಳಗೆ ಪೂಜೆ ನಡೆಸಬೇಕು, ಸಾರ್ವಜನಿಕರು ಸಂದಣಿ ಇಲ್ಲದಂತೆ ಎಚ್ಚರವಹಿಬೇಕು ಎಂದರು.