KARNATAKA
ಪ್ರೇಯಸಿ ತಾಯಿಗಾಗಿ ಕಳ್ಳತನಕ್ಕಿಳಿದ ಡ್ಯಾನ್ಸ್ ಮಾಸ್ಟರ್, 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್ ವಶಕ್ಕೆ..!
ಬೆಂಗಳೂರು : ಪ್ರೇಯಸಿಯ ತಾಯಿಗಾಗಿ ಡ್ಯಾನ್ಸ್ ಮಾಸ್ಟರ್ ಓರ್ವ ಕಳ್ಳತನದ ಕೃತ್ಯಕ್ಕಿಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳ ಡ್ಯಾನ್ಸ್ ಮಾಸ್ಟರ್ನನ್ನು ಬೆಂಗಳೂರಿನ ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗದಗ (Gadag) ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹುಲ್ಲೂರು ನಿವಾಸಿ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ (25) ಎಂದು ಗುರುತಿಸಲಾಗಿದೆ. ನಡಾಫ್ನ ಪ್ರೇಯಸಿಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಹಣ ಹೊಂದಿಸಲು ಕಳ್ಳತನದ ದಾರಿ ಹಿಡಿದಿದ್ದ. ಲವರ್ ತಾಯಿಗೆ ಚಿಕಿತ್ಸೆ ಕೊಡಲು ಕಳ್ಳತನಕ್ಕಿಳಿದ ಡ್ಯಾನ್ಸ್ ಮಾಸ್ಟರ್ ನನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್ನಲ್ಲಿ ಆರೋಪಿ ನಡಾಫ್ ಜಿಗಣಿಯ ರತ್ನಮ್ಮ ಎಂಬವರ ಸರವನ್ನು ಕಳ್ಳತನ ಮಾಡಿದ್ದ. ಬುಲೆಟ್ ಬೈಕ್ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಮಾಂಗಲ್ಯದ ಸರ ಎಗರಿಸಿ ಪರಾರಿಯಾಗಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಿಸಿ ಟಿವಿ ಜಾಡು ಹಿಡಿದ ಪೊಲೀಸರು ನಡಾಫ್ನನ್ನು ಬಂಧಿಸಿದ್ದಾರೆ.
ಅಲ್ಲದೆ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ. ನಡಾಫ್ ಈ ಹಿಂದೆ ಕಳ್ಳತನ ಕೇಸ್ನಲ್ಲಿ ಗದಗದಲ್ಲಿ ಬಂಧಿತನಾಗಿದ್ದು, ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ ಎನ್ನಲಾಗಿದೆ. ಈ ವೇಳೆ ಗದಗ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ಅಮಾನತು ಮಾಡಲಾಗಿತ್ತು. ಆತನ ವಿರುದ್ಧ ಹುಳಿಮಾವು, ಜೆಪಿ ನಗರ, ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣಗಳಿವೆ.