LATEST NEWS
ಜಿಲ್ಲೆಯ ಗಡಿಯಲ್ಲೇ ಕರೋನಾ ಪ್ರಕರಣ ಪತ್ತೆಯಾದರೂ ಸ್ಕ್ರೀಮಿಂಗ್ ವ್ಯವಸ್ಥೆ ಮಾಡದೇ ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಜಿಲ್ಲೆಯ ಗಡಿಯಲ್ಲೇ ಕರೋನಾ ಪ್ರಕರಣ ಪತ್ತೆಯಾದರೂ ಸ್ಕ್ರೀಮಿಂಗ್ ವ್ಯವಸ್ಥೆ ಮಾಡದೇ ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಮಂಗಳೂರು ಫೆಬ್ರವರಿ 5: ಚೀನಾದಲ್ಲಿ ಮಾರಕವಾಗಿ ಜೀವ ಬಲಿಪಡೆಯುತ್ತಿರುವ ಕೊರೊನಾ ವೈರಸ್ ಕರ್ನಾಟಕದ ನೆರೆ ರಾಜ್ಯವಾದ ಕೇರಳದಲ್ಲೂ ಪತ್ತೆಯಾಗಿದೆ. ಕೇರಳದಲ್ಲಿ ಈಗಾಗಲೇ ಮೂರು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರಲ್ಲಿ ಒಂದು ಪ್ರಕರಣ ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನದ್ದಾಗಿದೆ. ಈ ಹಿನ್ನಲೆಯಲ್ಲಿ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆಯನ್ನೂ ನೀಡಿದ್ದಾರೆ. ಆದರೆ ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ದಕ್ಷಿಣಕನ್ನಡಕ್ಕೆ ಕೇರಳ ಭಾಗದಿಂದ ಬರುವ ಗಡಿಯಲ್ಲೇ ಆರೋಗ್ಯ ಇಲಾಖೆ ಸ್ಕ್ರೀಮಿಂಗ್ ವ್ಯವಸ್ಥೆಯನ್ನು ಮಾಡದಿರುವುದು ದುರಂತವೂ ಆಗಿದೆ.
ಚೀನಾದಲ್ಲಿ ಮಾರಕವಾಗಿ ಜನರ ಜೀವ ಬಲಿ ಪಡೆಯುತ್ತಿರುವ ಕೊರೊನಾ ವೈರಸ್ ಕರ್ನಾಟಕದ ಕಾಲ ಬುಡದಲ್ಲೇ ಪತ್ತೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಗಡಿ ಭಾಗವಾದ ಕಾಸರಗೋಡಿನಲ್ಲಿ ಈ ವೈರಸ್ ಪತ್ತೆಯಾಗಿದೆ. ಕೇರಳದಲ್ಲಿ ಈವರೆಗೆ ಮೂರು ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಆತಂಕಕ್ಕೂ ಕಾರಣವಾಗಿದೆ. ಭಾರತ ಸರಕಾರ ಈ ವೈರಸ್ ದೇಶಕ್ಕೆ ಹರಡದಂತೆ ಎಲ್ಲಾ ಏರ್ ಪೋರ್ಟ್, ಬಂದರು ಪ್ರದೇಶಗಳಲ್ಲಿ ಸೋಂಕು ಪತ್ತೆಗೆ ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಈ ಮೂಲಕ ವೈರಾಣು ಇತರ ಪ್ರದೇಶಗಳಿಗೆ ಹರಡದಂತೆ ನಿಗಾ ವಹಿಸಲಾಗುತ್ತಿದೆ.
ಆದರೆ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಕಾಲ ಬುಡದಲ್ಲೇ ಅಂದರೆ ಕಾಸರಗೋಡಿನಲ್ಲಿ ಈ ವೈರಾಣು ಪತ್ತೆಯಾಗಿದ್ದು, ಯಾವುದೇ ಸಂದರ್ಭದಲ್ಲಿ ದಕ್ಷಿಣಕನ್ನಡದ ಮೂಲಕ ರಾಜ್ಯದಾದ್ಯಂತ ಹರಡುವ ಸಾಧ್ಯತೆಯಿದೆ. ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು, ವಿದ್ಯಾರ್ಥಿಗಳು, ಉದ್ಯೋಗಿಗಳು ಕಾಸರಗೋಡು ಹಾಗೂ ಆಸುಪಾಸಿನಿಂದ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುತ್ತಾರೆ. ಹೀಗೆ ಆಗಮಿಸುವವರನ್ನು ಸ್ಕ್ರೀನಿಂಗ್ ವ್ಯವಸ್ಥೆಗೆ ಒಳಪಡಿಸುವ ಅನಿವಾರ್ಯತೆಯಿದೆ.
ಜಿಲ್ಲಾ ಆರೋಗ್ಯ ಇಲಾಖೆ ಈಗಾಗಲೇ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಾ ವಹಿಸಲು 10 ಬೆಡ್ ಗಳ ವಾರ್ಡನ್ನೂ ಸಿದ್ಧಪಡಿಸಿದೆ. ಆದರೆ ಈ ಬೆಡ್ ಗಳಿಗೆ ಕೊರೊನಾ ಸೊಂಕು ಹರಡಿಸುವ ರೋಗಿ ತನ್ನಷ್ಟಕ್ಕೆ ಬಂದು ಮಲಗುವುದಿಲ್ಲ ಎನ್ನುವ ವಿಚಾರವನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.
ಕೇರಳದಿಂದ ಅದರಲ್ಲೂ ದಕ್ಷಿಣಕನ್ನಡ ಜಿಲ್ಲೆಯ ತಲಪಾಡಿ ಗಡಿಯಿಂದ ಬರುವ ಸಾವಿರಾರು ಸಂಖ್ಯೆಯಲ್ಲಿ ಕಾಸರಗೋಡು ಆಸುಪಾಸಿನಿಂದ ಬರುವವರ ಮೇಲೆ ನಿಗಾ ವಹಿಸಿ ವೈರಾಣು ಇರುವವರನ್ನು ಪತ್ತೆ ಹಚ್ಚುವ ಕಾರ್ಯ ಆಗಬೇಕಿದೆ. ಆದರೆ ಮಾರಕವಾದ ರೋಗಾಣು ಪಕ್ಕದ ಜಿಲ್ಲೆಯಲ್ಲಿ ಪತ್ತೆಯಾದರೂ ಈವರೆಗೂ ಗಡಿ ಭಾಗದಲ್ಲಿ ಸ್ಕ್ರೀಮಿಂಗ್ ವ್ಯವಸ್ಥೆಯನ್ನು ಮಾಡದಿರುವುದು ಜನರ ಆತಂಕಕ್ಕೂ ಕಾರಣವಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ವಾಹನಗಳು, ಸಾರ್ವಜನಿಕರು ತಲಪಾಡಿ ಗಡಿ ಮೂಲಕವೇ ರಾಜ್ಯವನ್ನು ಹೆಚ್ಚಾಗಿ ಪ್ರವೇಶಿಸುತ್ತಾರೆ. ಇಂಥಹ ಪ್ರಮುಖ ಸ್ಥಳಗಳಲ್ಲಿ ಆರೋಗ್ಯ ಅಧಿಕಾರಿಗಳ ನಿಗಾ ಅತ್ಯಂತ ಅಗತ್ಯವಾಗಿ ಬೇಕಾಗಿದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ಜೀವ ಬಲಿತೆಗೆಯುವ ಕೊರೊನಾ ವೈರಸ್ ಕಾಲ ಬುಡಕ್ಕೆ ಬಂದಿದ್ದರೂ ಎಚ್ಚೆತ್ತುಕೊಂಡಿಲ್ಲ.
ಕೇರಳದಿಂದ ರಾಜ್ಯ ಸಂಪರ್ಕಿಸುವ ಎಲ್ಲಾ ಗಡಿಭಾಗದಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎನ್ನುವ ಹೇಳಿಕೆಗಳನ್ನು ನೀಡುವುದಕ್ಕೂ ವಾಸ್ತವಕ್ಕೂ ಅಜಗಜಾಂತರ ವೆತ್ಯಾಸಗಳಿವೆ. ಗಡಿಯಲ್ಲಿ ನಿಗಾ ಯಾವ ರೀತಿ ನಡೆಯುತ್ತಿದೆ ಎನ್ನುವುದಕ್ಕೆ ತಲಪಾಡಿ ಗಡಿಯೇ ಉತ್ತರ ನೀಡುತ್ತಿದೆ.