KARNATAKA
ಸರ್ಕಾರದ ನಿದ್ದೆಗೆಡಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ (84) ಇನ್ನಿಲ್ಲ..!
ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ (84) ಗುರುವಾರ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ನಂತರ ಕರ್ನಾಟಕದಾದ್ಯಂತ ಸುದ್ದಿಯಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (84) ಗುರುವಾರ ಇಹಲೋಕ ತ್ಯಜಿಸಿದರು. ಅವರು ಮಾಡಿದ್ದ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ‘ಪೇ ಸಿಎಂ’ ಅಭಿಯಾನ ನಡೆಸಿದ್ದಲ್ಲದೆ, ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಕೆಂಪಣ್ಣ ಕಾಂಗ್ರೆಸ್ ಆಡಳಿತದಲ್ಲೂ ಶೇ 40ರ ಕಮಿಷನ್ ಮುಂದುವರಿದಿದೆ ಎಂದು ಕೆಂಪಣ್ಣ ಇದೇ ವರ್ಷ ಫೆಬ್ರವರಿಯಲ್ಲಿ ಆರೋಪಿಸಿದ್ದರು. ಕೆಂಪಣ್ಣ ಆರೋಪ ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿದ್ದರೆ ಆಡಳಿತಾರೂಢ ಕಾಂಗ್ರೆಸ್ಗೆ ಇರಿಸುಮುರಿಸು ತಂದಿತ್ತು. ಗುತ್ತಿಗೆದಾರರ ಬಿಲ್ಗಳನ್ನು ಕ್ಲಿಯರ್ ಮಾಡಲು ಕಮಿಷನ್ ಕೇಳಲಾಗುತ್ತಿದೆ ಎಂದು ಕೆಂಪಣ್ಣ ಆರೋಪಿಸಿದ್ದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಐದೂವರೆ ತಿಂಗಳಾದರೂ ಕಾಮಗಾರಿ ಬಿಲ್ ಬಾಕಿ ಪಾವತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಬಾಕಿ ಬಿಲ್ ಪಾವತಿಯಾಗುತ್ತಿಲ್ಲ ಎಂಬುದು ಒಂದೆಡೆಯಾದರೆ, ಕೆಲವು ಇಲಾಖೆಗಳಲ್ಲಿ ಆಗುತ್ತಿರುವ ಸಣ್ಣಪುಟ್ಟ ಪಾವತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಇದರಿಂದ ಅನೇಕ ಸಮಸ್ಯೆ ಗುತ್ತಿಗೆದಾರರಿಗೆ ಎದುರಾಗಿದೆ ಎಂದು ಕೆಂಪಣ್ಣ ಆರೋಪಿಸಿದ್ದರು.