BELTHANGADI
ಪ್ರಧಾನಿ ಮೋದಿ ಸ್ವಾಗತಕ್ಕೆ ಜಿಲ್ಲೆ ಸಜ್ಜು
ಪ್ರಧಾನಿ ಮೋದಿ ಸ್ವಾಗತಕ್ಕೆ ಜಿಲ್ಲೆ ಸಜ್ಜು
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುತ್ತಿರುವ ನರೇಂದ್ರ ಮೋದಿಯವರ ಸ್ವಾಗತಕ್ಕೆ ಜಿಲ್ಲೆ ಸಜ್ಜಾಗಿದೆ. ಒಂದೆಡೆ ಜಿಲ್ಲಾ ಬಿಜೆಪಿ ಮೋದಿಯವರನ್ನು ಸ್ವಾಗತಿಸುದಕ್ಕೋಸ್ಕರ ಪ್ರಧಾನಿ ಬರುವ ಮಾರ್ಗದುದ್ದಕ್ಕೂ ತಮ್ಮ ಪಕ್ಷದ ಬ್ಯಾನರ್ ಗಳನ್ನು ಅಳವಡಿಸಿದ್ದರೆ, ಇನ್ನೊಂದೆಡೆ ಧರ್ಮಸ್ಥಳದಲ್ಲೂ ಅದ್ದೂರಿ ಸ್ವಾಗತಕ್ಕೆ ಸಿದ್ದತೆ ಚುರುಕುಗೊಂಡಿದೆ. ಅಕ್ಟೋಬರ್ 29 ರ ಬೆಳಿಗ್ಗೆ ಸುಮಾರು 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ನೇರವಾಗಿ ಧರ್ಮಸ್ಥಳ ಸೇರಲಿದ್ದಾರೆ. ಧರ್ಮಸ್ಥಳದಲ್ಲಿ ಪ್ರಧಾನಿಗಳ ಹೆಲಿಕ್ಟಾಪ್ಟರ್ ಇಳಿಸಲು ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಪೋಲೀಸರು ಹಾಗೂ ಎಸ್.ಪಿ.ಜಿ ಕಮಾಂಡೋಗಳು ಹೆಲಿಪ್ಯಾಡ್ ಹಾಗೂ ದೇವಸ್ಥಾನಕ್ಕೆ ಬರುವ ರಸ್ತೆಯ ಇಕ್ಕೆಲಗಳಲ್ಲಿ ತಪಾಸಣೆಯನ್ನೂ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ಬಂದಿಳಿಯುವ ಪ್ರಧಾನಿಗಳು ನೇರವಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಧರ್ಶನಕ್ಕೆ ತೆರಳಲಿದ್ದು, ಅಲ್ಲಿಂದ ಉಜಿರೆಯಲ್ಲಿ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಧರ್ಮಸ್ಥಳದಿಂದ ಉಜಿರೆಗೆ ಹೆಲಿಕಾಪ್ಟರ್ ಅಥವಾ ರಸ್ತೆ ಮೂಲಕ ತೆರಳುವ ಸಾಧ್ಯತೆಯಿದ್ದು, ಪೋಲೀಸರು ಈ ಎರಡೂ ಆಯ್ಕೆಯನ್ನು ತನ್ನ ಬಂದೋಬಸ್ತ್ ಲಿಸ್ಟ್ ನಲ್ಲಿ ಸೇರಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ಧರ್ಮಸ್ಥಳ ಸುತ್ತಮುತ್ತ ಕಾಡುಗಳಲ್ಲಿ ಕಳೆದ ಎರಡು ದಿನಗಳಿಂದ ನಕ್ಸಲ್ ನಿಗ್ರಹ ದಳ ಕೂಂಬಿಗ್ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕಾರ್ಯಕ್ರಮದ ಬಂದೋಬಸ್ತ್ ಹಿನ್ನಲೆಯಲ್ಲಿ 8 ಎಸ್ಪಿಗಳು, 25 ಡಿಎಸ್ಪಿಗಳು ಹಾಗೂ ಇತರ ಅಧಿಕಾರಿಗಳು ಸೇರಿದಂತೆ ಸುಮಾರು 2500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಪ್ರಧಾನಿ ಮೋದಿ ಧರ್ಮಸ್ಥಳದ ಭೇಟಿ ಹಿನ್ನಲೆಯಲ್ಲಿ ಇಡೀ ಧರ್ಮಸ್ಥಳ ಕ್ಷೇತ್ರದ ಪರಿಸರ ವಿಶೇಷ ಸಿಂಗಾರಗೊಂಡಿದ್ದು, ಪ್ರಧಾನಿಗಳ ಸ್ವಾಗತಕ್ಕೆ ಅಣಿಯಾಗಿ ನಿಂತಿದೆ.