DAKSHINA KANNADA
ಲೋಕಸಭಾ ಚುನಾವಣೆಯಲ್ಲಿ ದ.ಕ. ಬಿಜೆಪಿಗೆ ಸತತ ಗೆಲುವನ್ನು ತಂದು ಕೊಟ್ಟ ಅದೃಷ್ಟದ ಕಾರ್ಯಾಲಯ ಕಾರ್ಯಾರಂಭ..!

ಮಂಗಳೂರು : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಮಂಗಳೂರಿನಲ್ಲಿ ಅದೃಷ್ಟದ ಮತ್ತು ಗೆಲುವಿನ ಕಾರ್ಯಾಲಯವೆಂದೇ ಖ್ಯಾತಿ ಪಡೆದ ಬಿಜೆಪಿಯ ಚುನಾವಣಾ ಕಾರ್ಯಾಲಯ ಕಾರ್ಯಾರಂಭಗೊಂಡಿತು.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಈ ಬಿಜೆಪಿ ಚುನಾವಣಾ ಕಾರ್ಯಾಲಯ ಶುಭಾರಂಭಗೊಂಡಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಈ ಕಾರ್ಯಾಲಯ ಬಿಜೆಪಿ ಪಾಲಿಗೆ ಅದೃಷ್ಟದ ಕಾರ್ಯಾಲಯವಾಗಿದ್ದು ಇದನ್ನು ಕೇಂದ್ರವಾಗಿಟ್ಟು ಮಾಡಿದ್ದ ಪ್ರತಿಯೊಂದು ಚುನಾವಣೆ ಬಿಜೆಪಿ ಗೆದ್ದಿದೆ. 2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆದಿತ್ತು. ಪ್ರಥಮ ಬಾರಿಗೆ ಜಿಲ್ಲಾ ಬಿಜೆಪಿ ಬಂಟ್ಸ್ ಹಾಸ್ಟೆಲ್ ಬಳಿಯ ಈ ಮನೆಯನ್ನು ಚುನಾವಣಾ ಕಾರ್ಯಾಲಯವಾಗಿ ಬಳಸಿತ್ತು. ಆಗ ಬಿಜೆಪಿಯ ಡಿ.ವಿ.ಸದಾನಂದ ಗೌಡ ಮಂಗಳೂರು ಲೋಕಸಭೆ ಕ್ಷೇತ್ರದಿಂದ ಗೆದ್ದರೆ, ದ.ಕ. ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. 2008ರ ವಿಧಾನಸಭೆ ಚುನಾವಣೆಯಲ್ಲೂ ಈ ಮನೆ ಕಾರ್ಯಾಲಯವಾಗಿತ್ತು. ಜಿಲ್ಲೆಯ 8 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಜಯ ಗಳಿಸಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಬಿಜೆಪಿ ಕಣಕ್ಕಿಳಿಸಿದ ಸಂದರ್ಭವೂ ಇದೇ ಕಾರ್ಯಾಲಯದಲ್ಲಿ ರಣತಂತ್ರ ರೂಪಿಸಿತ್ತು. ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಿಸಲು ಯಶಸ್ವಿಯಾಗಿತ್ತು. ಆದ್ರೆ 2013ರ ವಿಧಾನಭೆ ಚುನಾವಣೆಯಲ್ಲಿ ಅದೃಷ್ಟದ ಕಾರ್ಯಾಲಯವನ್ನು ತೊರೆದ ಬಿಜೆಪಿ ಕೊಡಿಯಾಲ್‌ಬೈಲ್‌ನಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಕೆಳಗೆ ಚುನಾವಣಾ ಕಾರ್ಯಾಲಯ ತೆರೆದಿತ್ತು. ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸೋಲು ಕಂಡಿತು. ಒಂದೇ ವರ್ಷದಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದಾಗ ಬಿಜೆಪಿ ಮತ್ತೆ ಈ ಹಳೆ ಮನೆಯಲ್ಲೇ ಚುನಾವಣಾ ಕಾರ್ಯಾಲಯ ತೆರೆದಿತ್ತು. ದಾಖಲೆ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿ ಗೆದ್ದಿದ್ದರು. ಬಿಜೆಪಿ 2018ರ ವಿಧಾನಸಭೆ ಚುನಾವಣೆಯಲ್ಲೂ ಅದೇ ಮನೆಯಲ್ಲಿ ಕಾರ್ಯಾಲಯ ತೆರೆದು ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಆ ಮನೆ ಕಾರ್ಯಾಲಯವಾಗಿ ಜಯ ಸಾಧಿಸಿತ್ತು. ಈಗ ಮತ್ತೆ ಅದೃಷ್ಟದ ಕಚೇರಿಯ ಬಾಗಿಲು ತೆರೆದು ಸುಣ್ಣ ಬಣ್ಣ, ಬಂಟಿಂಗ್ಸ್ ಗಳಿಂದ ಶೃಂಗಾರಗೊಂಡಿದೆ .

2004 ರಿಂದಲೂ ಇದು ಗೆಲುವಿನ ಕಾರ್ಯಾಲಯವಾಗಿದ್ದು ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆಯಾದಾಗಲೂ ಈ ಕಾರ್ಯಾಲಯ ಬಿಜೆಪಿ ನಿರಾಸೆ ಮಾಡ್ದೆ ಕೈ ಹಿಡಿದಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಸಂಸದ ಕಟೀಲ್ ದ.ಕ ಜಿಲ್ಲೆಯಲ್ಲಿ ಈ ಕಾರ್ಯಾಲಯದ ಮೂಲಕ ನಮಗೆ ಗೆಲುವಾಗಿದೆ. ಇಂದಿನ ಶುಭ ಮುಹೂರ್ತ ದಲ್ಲಿ ಕಾರ್ಯಾಲಯ ಉದ್ಘಾಟನೆ ಮಾಡಲಾಗಿದ್ದು ಈ ಬಾರಿ ನಾಲ್ಕು ಲಕ್ಷಕ್ಕೂ ಅಧಿಕ ಬಹುಮತದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದ್ದಾರೆ.