“ನಿಸರ್ಗ’’ವಾಯ್ತು ಕ್ಷೀಣ ..ಮಹಾ ಆಪತ್ತಿನಿಂದ ಮುಂಬೈ ಪಾರು
– ಪಥ ಬದಲಿಸಿದ ಸೈಕ್ಲೋನ್ ನಿಸರ್ಗ
ಮುಂಬೈ, ಜೂನ್ 3: ನಿಸರ್ಗ ಚಂಡಮಾರುತದ ಭೀತಿಯಿಂದ ನಲುಗಿ ಹೋಗಿದ್ದ ಮುಂಬೈ ಮಹಾನಗರಿ ಸ್ವಲ್ಪದರಲ್ಲಿ ಆಪತ್ತಿನಿಂದ ಪಾರಾಗಿದೆ. ಮುಂಬೈನಿಂದ 75 ಕಿಮೀ ದೂರದಲ್ಲಿ ಸಮುದ್ರ ಮಧ್ಯೆ ಕೇಂದ್ರೀಕೃತವಾಗಿದ್ದ ಸೈಕ್ಲೋನ್ ತನ್ನ ಪಥ ಬದಲಿಸಿದ್ದು, ನೈರುತ್ಯ ಭಾಗಕ್ಕೆ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಅರಬ್ಬೀ ಸಮುದ್ರ ಮಧ್ಯೆ 110ರಿಂದ 120 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ನಿಸರ್ಗ ಚಂಡಮಾರುತ ಪಥ ಬದಲಿಸಿದ್ದು ಇನ್ನು ಐದಾರು ಗಂಟೆಗಳಲ್ಲಿ ಕ್ಷೀಣವಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಇಂದು ರಾತ್ರಿ ಹೊತ್ತಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಭೀತಿಯಿಂದ ಜನರು ದೂರವಾಗಿದ್ದಾರೆ. ಚಂಡಮಾರುತ ಭೀತಿಯಿಂದಾಗಿ ಗುಜರಾತ್ ಕರಾವಳಿಯ ವಿವಿಧ ಜಿಲ್ಲೆಗಳ ಕಡಲ ತೀರದಿಂದ 67 ಸಾವಿರ ಜನರನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡಲಾಗಿತ್ತು. ಮಹಾರಾಷ್ಟ್ರ ಕರಾವಳಿ ಮತ್ತು ಮುಂಬೈ ಮಹಾನಗರಿಯಲ್ಲೂ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು. ಮುಂಬೈ ನಗರ ಒಂದರಲ್ಲೇ 20 ಎನ್ ಆರ್ ಎಫ್ ತಂಡಗಳನ್ನು ನಿಯೋಜಿಸಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜು ಮಾಡಲಾಗಿತ್ತು.
ಇತ್ತೀಚೆಗಷ್ಟೇ ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಅಂಫಾನ್ ಚಂಡಮಾರುತ ನೂರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಹೀಗಾಗಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು. ಮುಂಬೈ ಏರ್ಪೋರ್ಟ್ ನಲ್ಲಿ ಸಂಜೆ ಏಳು ಗಂಟೆ ವರೆಗೆ ದೇಶೀಯ ವಿಮಾನಗಳ ಸಂಚಾರವನ್ನು ನಿಲ್ಲಿಸಲಾಗಿದ್ದರೆ, ಹೆಚ್ಚಿನ ಅನಾಹುತ ತಪ್ಪಿಸಲು ಇಂಡಿಯನ್ ಏರ್ಫೋರ್ಸ್ ತನ್ನ ಪಡೆಗಳನ್ನು ಕರೆಸಿಕೊಂಡಿತ್ತು. ಇದರ ಜೊತೆಗೆ ಇಂಡಿಯನ್ ಕೋಸ್ಟ್ ಗಾರ್ಡ್ ಪಡೆಯ ಆರು ತುಕಡಿಗಳನ್ನು ಮಹಾರಾಷ್ಟ್ರ ಕರಾವಳಿಯಲ್ಲಿ ನಿಯೋಜನೆ ಮಾಡಲಾಗಿತ್ತು.
ಚಂಡಮಾರುತ ಪರಿಣಾಮ ಮಹಾರಾಷ್ಟ್ರದ ರಾಯಗಢ, ರತ್ನಗಿರಿ, ಮುಂಬೈ ಪ್ರಾಂತ್ಯದ ಕೆಲವೆಡೆ ಮಧ್ಯಾಹ್ನದಿಂದ ಭಾರೀ ಮಳೆಯಾಗಿದ್ದು ಬಿಟ್ಟರೆ ಬೇರೆ ಯಾವುದೇ ಅನಾಹುತ ಆಗಿಲ್ಲ ಎಂದು ಮಹಾರಾಷ್ಟ್ರ ಸರಕಾರ ಹೇಳಿಕೊಂಡಿದೆ. ಇದೇ ವೇಳೆ, ಗುಜರಾತ್ ಕರಾವಳಿಯೂ ಚಂಡಮಾರುತ ಭೀತಿಯಿಂದ ಪಾರಾಗಿದೆ ಎಂದು ಅಲ್ಲಿನ ಸರಕಾರಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.