LATEST NEWS
ಬಿಪರ್ ಜಾಯ್ ಚಂಡಮಾರುತ ಪ್ರಭಾವ – ಕರಾವಳಿ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ…!!

ಮಂಗಳೂರು ಜೂನ್ 7: ನೀರಿಕ್ಷೆಯಂತೆ ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಚಂಡಮಾರುತವಾಗಿ ಬದಲಾಗಿದ್ದು, ಈ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಲ್ಲಿ ಅರಬ್ಬೀಸಮುದ್ರ ತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಬುಧವಾರ ಬೆಳಗಿನಿಂದ ಹೆಚ್ಚಾಗಿದೆ. ಜಿಲ್ಲಾಡಳಿತದ ಆದೇಶದಂತೆ ಉಳ್ಳಾಲ, ಸೋಮೇಶ್ವರ ಸಮುದ್ರ ತೀರಕ್ಕೆ ಭೇಟಿ ನೀಡಿದ್ದ ಪ್ರವಾಸಿಗರನ್ನು ಗೃಹರಕ್ಷಕ ಹಿಂದಕ್ಕೆ ಕಳುಹಿಸಿದರು.
ಚಂಡಮಾರುತದ ಪ್ರಭಾವದಿಂದ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರದ ಅಂಚಿನ ಬಂಡೆಕಲ್ಲುಗಳಿಗೆ ವೇಗದಿಂದ ಬಂದು ಅಪ್ಪಳಿಸುತ್ತಿವೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ಣ, ಹಿಲೆರಿಯಾ ನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಪಾಡಿ ಸಮುದ್ರ ತೀರದ ನಿವಾಸಿಗಳಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಗೃಹರಕ್ಷಕ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
