LATEST NEWS
ಪ್ರತಿವರ್ಷ ಸಮುದ್ರ ಪಾಲಾಗ್ತಾ ಇದೆ ಕೋಟಿ ಕೋಟಿ ಹಣ.. ಈ ಬಾರಿ 26 ಕೋಟಿ….!!

ಮಂಗಳೂರು : ಕರಾವಳಿ ತೀರದ ಕುಟುಂಬಗಳ ಪ್ರತೀ ವರ್ಷದ ಸಂಕಷ್ಟದಂತಿರುವ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಎನ್ನುವುದು ಮರೀಚಿಕೆಯಂತಾಗಿದೆ. ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಸರಕಾರ ಕೋಟಿ-ಕೋಟಿ ಹಣ ಖರ್ಚು ಮಾಡಿ ಕಡಲತಡಿಗೆ ಹಾಕಿದ ಬಂಡೆ ಕಲ್ಲುಗಳು ಒಂದೇ ಮಳೆಗೆ ಕಡಲ ಪಾಲಾಗುತ್ತಿದೆ. ಇದೀಗ ಮತ್ತೆ 26.32 ಕೋಟಿ ರೂಪಾಯಿಗಳ ಪ್ಯಾಕೇಜ್ ನ ಕಾಮಗಾರಿ ಆರಂಭಗೊಂಡಿದ್ದರೂ, ಅಸಮರ್ಪಕ ಕಾಮಗಾರಿಯಿಂದಾಗಿ ಈ ಬಾರಿ ಮತ್ತೆ ಕಡಲು ಮನೆಗೆ ನುಗ್ಗುವ ಭೀತಿಯಲ್ಲಿ ಕರಾವಳಿಯ ಕುಟುಂಬಗಳಿವೆ.
7516 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಾಚಿಕೊಂಡಿರುವ ಭಾರತದ ಕರಾವಳಿ ತೀರದಲ್ಲಿ 33 ಶೇಕಡಾದಷ್ಟು ಕರಾವಳಿಯಲ್ಲಿ ಕಡಲು ಕೊರೆತದ ಸಮಸ್ಯೆಯಿದೆ. ಪಶ್ಚಿಮ ಕರಾವಳಿಯಲ್ಲಿ ಈ ಸಮಸ್ಯೆ ಅತೀ ಹೆಚ್ಚಾಗಿದ್ದು, ಕಡಲು ಕೊರೆತ ಸಮಸ್ಯೆಯು ಕರ್ನಾಟಕದ ಕರಾವಳಿ ತೀರವನ್ನೂ ಬಿಟ್ಟಿಲ್ಲ. ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಸಮಸ್ಯೆಯ ತೀವೃತೆ ಬೆಳಕಿಗೆ ಬಂದಿರೋದು ಮಾತ್ರ ಇತ್ತೀಚಿನ ಕೆಲ ವರ್ಷಗಳಲ್ಲಿ. ಕರ್ನಾಟಕದಲ್ಲಿ ಸುಮಾರು 320 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕರಾವಳಿ ತೀರವಿದ್ದು, ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತದ ತೀವೃತೆ ಮಾತ್ರ ಹೆಚ್ಚಾಗಿದೆ.

ಸಿ.ಆರ್.ಝಡ್ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ, ನದಿ ಹಾಗೂ ಸಮುದ್ರ ತೀರದ ಅತಿಕ್ರಮಣ ಹೆಚ್ಚಾದಂತೆ ಕಡಲ್ಕೊರೆತದ ಪರಿಣಾಮದ ಹಾನಿಯೂ ಹೆಚ್ಚಾಗಿರುವುದು ಕಳೆದ 10 ವರ್ಷಗಳ ವರದಿಗಳನ್ನು ಅವಲೋಕಿಸಿದಲ್ಲಿ ತಿಳುವಳಿಕೆಗೆ ಬರುತ್ತೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಪ್ರತಿ ಮಳೆಗಾಲದ ಸಂದರ್ಭದಲ್ಲೂ ಭಾರೀ ಕಡಲ್ಕೊರೆತ ಸಂಭವಿಸುತ್ತಿದ್ದು, ಪ್ರತೀ ಸಂದರ್ಭದಲ್ಲೂ ಸರಾಸರಿ ಇಪ್ಪತ್ತಕ್ಕೂ ಮಿಕ್ಕಿದ ಮನೆಗಳು ಸಮುದ್ರ ಪಾಲಾಗುತ್ತಿದೆ.
ಸಮುದ್ರ ಕೊರೆತ ತಡೆಗಾಗಿ 2010 ರಿಂದ ಈವರೆಗೆ ಎಡಿಬಿ ಯೋಜನೆಯಡಿ ಸಮುದ್ರಕ್ಕೆ ಕಲ್ಲು ಹಾಕುವ ಕಾಮಗಾರಿಯು ನಡೆಯುತ್ತಲೇ ಇದೆ. ಆದರೆ ಪ್ರತಿವರ್ಷ ಹಾಕುವ ಕಲ್ಲುಗಳು ಸಮುದ್ರದ ಪಾಲಾಗುತ್ತಿದ್ದರೂ, ಕಳೆದ 9 ವರ್ಷಗಳಿಂದ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. 2018 ರಿಂದ ಮತ್ತೆ ಉಚ್ಚಿಲ ಕಡಲತೀರದಿಂದ ಬಟ್ಟಂಪ್ಪಾಡಿ ವರೆಗೆ 2 ಕಿಲೋಮೀಟರ್ ವ್ಯಾಪ್ತಿಗೆ 26.32 ಕೋಟಿ ರೂಪಾಯಿ ವೆಚ್ಚದ 10 ಬರ್ಮ್ಸ್ ಹಾಗೂ ತೀರದುದ್ದಕ್ಕೂ ಕಲ್ಲುಗಳ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಕರಾರಿನ ಪ್ರಕಾರ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕಂಪನಿಗೆ 2020 ಅಗಸ್ಟ್ ರೊಳಗೆ ಮುಗಿಸಲು ಗಡುವನ್ನೂ ನೀಡಲಾಗಿದೆ. ಆದರೆ ಕಂಪನಿಯು ಕೇವಲ ಕಡಲಿಗೆ ಬರ್ಮ್ಸ್ ಗಳನ್ನು ನಿರ್ಮಿಸಿದ್ದು ಹೊರತುಪಡಿಸಿ ಕೆಲವು ಕಡೆಗಳಲ್ಲಿ ಮಾತ್ರ ತೀರಕ್ಕೆ ಬಂಡೆಗಳ ತಡೆಗೋಡೆಯನ್ನು ನಿರ್ಮಿಸಿದೆ. ಇದರಿಂದಾಗಿ ತಡೆಗೋಡೆ ಇಲ್ಲದ ಪ್ರದೇಶಗಳ ಮನೆಗಳಿಗೆ ಕಡಲ್ಕೊರೆತದ ಆತಂಕ ಎದುರಾಗಿದೆ. ಇತ್ತೀಚೆಗಷ್ಟೇ ಸಂಭವಿಸಿದ ನಿಸರ್ಗ ಚಂಡಮಾರುತದ ಸಮಯದಲ್ಲೂ ಈ ಕಡಲ ತೀರದಲ್ಲಿ ಭಾರೀ ಪ್ರಮಾಣದ ಅಲೆಗಳು ಎದ್ದಿದೆಯಲ್ಲದೆ, ಕಡಲಿನ ನೀರು ಹಲವು ಮನೆಗಳಿಗೂ ನುಗ್ಗಿವೆ.
ಉಳ್ಳಾಲ ಕಡಲು ತೀರದಿಂದ ಹಿಡಿದು ಸೋಮೇಶ್ವರ ಉಚ್ಚಿಲದ ವರೆಗೆ ಕಡಲು ಕೊರೆತದ ಸಮಸ್ಯೆಯಿದ್ದು, ಇಂಥ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಬ್ರೇಕ್ ವಾಟರ್, ಬರ್ಮ್ಸ್ ಹಾಗೂ ಬಂಡೆಗಳ ತಡೆಗೋಡೆ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಆದರೆ ಕೊರೊನಾ ಲಾಕ್ ಡೌನ್ ಬಳಿಕ ಕಾಮಗಾರಿಯನ್ನು ಕೈಗೆತ್ತಿಕೊಂಡ ಕಂಪನಿಯು ಕೆಲಸವನ್ನು ನಿಲ್ಲಿಸಿದೆ. ಹೀಗೆ ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿ ತೆರಳಿರುವ ಕಂಪನಿಯು ಮತ್ತೆ ಯಾವಾಗ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿ ತೀರದ ಜನರಿದ್ದಾರೆ. ಈ ರೀತಿ ಅಸಮರ್ಪಕ ಕಾಮಗಾರಿ ನಡೆಸಿರುವ ಪರಿಣಾಮ ಈ ಬಾರಿ ಕಡಲು ಮತ್ತೆ ಮನೆಗೆ ನುಗ್ಗಲಿದೆ ಎನ್ನುವ ಆತಂಕದಲ್ಲೂ ಕರಾವಳಿ ತೀರದ ಕುಟುಂಬಗಳಿವೆ.
ಪ್ರತೀ ವರ್ಷವೂ ಮಳೆಗಾಲದ ಸಂದರ್ಭದಲ್ಲಿ ಕಡಲ್ಕೊರೆತಕ್ಕೆ ಸಿಲುಕಿ ಹಲವಾರು ಮನೆಗಳು ಸಮುದ್ರ ಪಾಲಾಗುತ್ತಿದೆ. ಇಂಥ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆಯನ್ನೇನೋ ನೀಡುತ್ತದೆ. ಆದರೆ ಈ ಭರವಸೆಗಳು ಮಳೆಗಾಲದ ನೀರಿನ ಹರಿವಿನಂತೇ ಹರಿದುಹೋಗಿರುವುದು ಮಾತ್ರ ಕಟುವಾದ ಸತ್ಯ…