LATEST NEWS
ಮಂಜೇಶ್ವರ ಠಾಣೆ ; ಕೊಳೆತು ಬಿದ್ದಿವೆ ಕೋಟ್ಯಂತರ ಮೌಲ್ಯದ ವಾಹನಗಳು !!
ಕಾಸರಗೋಡು, ಜೂನ್ 27 : ಗಡಿಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ವಾಹನ ಕಳ್ಳತನ, ಮರಳು ಸಾಗಣೆ ದಂಧೆ, ಅಕ್ರಮವಾಗಿ ಜಾನುವಾರು ಮತ್ತು ಮದ್ಯ ಸಾಗಾಟ ಸಾಮಾನ್ಯ. ಅದೇ ಕಾರಣವೋ ಏನೋ ಗಡಿಭಾಗದ ಮಂಜೇಶ್ವರ ಠಾಣೆಯಲ್ಲಿ ಪೊಲೀಸರಿಂದ ಸೀಝ್ ಆದ ಸಾವಿರಾರು ವಾಹನಗಳು ರಾಶಿ ಬಿದ್ದಿದ್ದು ಕೋಟ್ಯಂತರ ಮೌಲ್ಯದ ವಾಹನಗಳು ಹಾಳಾಗಿ ಹೋಗುತ್ತಿರುವುದು ಬೆಳಕಿಗೆ ಬಂದಿದೆ.
ಮಂಜೇಶ್ವರ ಠಾಣೆಯ ಸುತ್ತಮುತ್ತ ಖಾಸಗಿ ಜಾಗದಲ್ಲೆಲ್ಲಾ ಪೊಲೀಸರು ಸೀಜ್ ಮಾ಼ಡಿ ತಂದ ವಾಹನಗಳು ತುಂಬಿಕೊಂಡಿವೆ. ಮರಳು ತುಂಬಿದ ಲಾರಿ, ಟೆಂಪೋಗಳು ಅನಾಥವಾಗಿ ಬಿದ್ದುಕೊಂಡಿದ್ದರೆ, ತುಕ್ಕು ಹಿಡಿದು ನಾರುತ್ತಿರುವ ಬೈಕ್, ಆಟೋ ರಿಕ್ಷಾಗಳಿಗೆ ಲೆಕ್ಕವೇ ಇಲ್ಲ. ಹತ್ತು ವರ್ಷಗಳಿಂದ ಇಲ್ಲಿ ಹೀಗೆ ಪ್ರತಿ ವರ್ಷ ಪೊಲೀಸರು ಹಿಡಿದು ತಂದ ವಾಹನಗಳು ವಿಲೇವಾರಿಯಾಗದೆ ಉಳಿದುಕೊಂಡಿವೆ. ಈ ಪೈಕಿ ಹೆಚ್ಚಿನ ವಾಹನಗಳು ಗುಜರಿಯಾಗಿದ್ದು ಪೊದೆ, ಬಳ್ಳಿಗಳು ಸುತ್ತಿಕೊಂಡಿವೆ. ಮಳೆ, ಬಿಸಿಲಿಗೆ ಬಿದ್ದುಕೊಂಡಿರುವ ಆಟೋ ರಿಕ್ಷಾಗಳು ಪೂರ್ತಿಯಾಗಿ ಕೊಳೆತು ನಾರತೊಡಗಿವೆ. ಕೆಲವು ರಿಕ್ಷಾಗಳಲ್ಲಿ ಬರಿಯ ಬಾಡಿ ಮಾತ್ರ ಇದ್ದರೆ, ಒಳಗಿನ ಬಿಡಿಭಾಗಗಳೆಲ್ಲ ಕಾಣೆಯಾಗಿವೆ.
ಹಳೆಯ ಟಿಪ್ಪರ್, ಕಂಟೇನರ್ ಲಾರಿಗಳು, ಮರಳು- ಕೆಂಪು ಕಲ್ಲು ಸಾಗಿಸುವ ಲಾರಿಗಳೂ ಇದ್ದು ವಾರಸುದಾರರು ಬರದೆ ಕೊಳೆಯತೊಡಗಿದೆ. ಲಕ್ಷಾಂತರ ಮೌಲ್ಯದ ಎಸ್ಟೀಮ್, ಸುಮೋ, ರಿಟ್ಸ್ ಕಾರುಗಳೂ ಇದ್ದು ಮಳೆ, ಬಿಸಿಲಿಗೆ ಮೈಯೊಡ್ಡಿ ಒಂದೆಡೆ ತುಕ್ಕು ಹಿಡಿದಿದ್ದರೆ, ಟೈರ್, ಸೀಟ್ ಮತ್ತಿತರ ವಸ್ತುಗಳು ಹಾಳಾಗಿ ಹೋಗಿವೆ. ಈ ಬಗ್ಗೆ ಅಲ್ಲಿನ ಪೊಲೀಸರಲ್ಲಿ ಕೇಳಿದರೆ, ನಾವು ಸೀಜ್ ಮಾಡಿ ತರುತ್ತೇವೆ. ಅದನ್ನು ಬಿಡಿಸಲು ಯಾರೂ ಬರುವುದಿಲ್ಲ. ಆಬಳಿಕ ಕೋರ್ಟಿಗೆ ಹಾಕ್ತೀವಿ.. ವಿಲೇವಾರಿ ಮಾಡಲು ಕೋರ್ಟ್ ಆದೇಶವೇ ಬರಬೇಕು. ನಾವೇನು ಮಾಡಲು ಬರುತ್ತೆ ಅಂತ ಮರು ಪ್ರಶ್ನೆ ಹಾಕುತ್ತಾರೆ.
ಅಕ್ರಮವಾಗಿ ದಂಧೆಗೆ ಬಳಸುವ ವಾಹನಗಳೆಲ್ಲ ಹೆಚ್ಚಿನವು ಕದ್ದ ಮಾಲುಗಳು. ಕದ್ದು ತಂದ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಹಾಕಿ ಹೊಯ್ಗೆ, ಗೋಸಾಗಾಟ, ಮದ್ಯ ಸಾಗಾಟಕ್ಕೆ ಬಳಸುತ್ತಾರೆ. ಪೊಲೀಸರು ಸೀಜ್ ಮಾಡಿದರೆ ತಮ್ಮಲ್ಲಿ ರೆಕಾರ್ಡ್ ಇಲ್ಲದಿರುವುದರಿಂದ ಬಿಡಿಸಿಕೊಂಡು ಹೋಗಲು ಬರುವುದಿಲ್ಲ. ಇತ್ತ ಪೊಲೀಸರೂ ಆ ಬಗ್ಗೆ ಹೆಚ್ಚಿನ ಪ್ರಶ್ನೆ ಮಾ಼ಡಲು ಹೋಗುವುದಿಲ್ಲ. ಕೆದಕಿದರಷ್ಟೇ ಕದ್ದು ತಂದ ಮಾಲಿನ ಅಸಲಿ ವಿಚಾರ ಹೊರಗೆ ಬರುವುದಷ್ಟೇ..
ಹೀಗಾಗಿ ಪ್ರತಿ ವರ್ಷ ಸೀಜ್ ಮಾಡಿ ತಂದು ಹಾಕಿದ ವಾಹನಗಳು ಸಾವಿರಕ್ಕೂ ಹೆಚ್ಚಿದ್ದು, ಅಲ್ಲೀಗ ಇಡುವುದಕ್ಕೇ ಜಾಗ ಇಲ್ಲದಾಗಿದೆ. ಗುಜರಿಗೆ ಹಾಕುವುದಿದ್ದರೂ, ಕೋರ್ಟ್ ಆದೇಶ ಇಲ್ಲದೆ ಪೊಲೀಸರು ಆ ಬಗ್ಗೆ ಗೊಡವೆಗೆ ಹೋಗಿಲ್ಲ. ಕೋಟ್ಯಂತರ ಮೌಲ್ಯದ ವಾಹನಗಳು ಹೀಗೆ ಹಾಳಾಗಿ ಹೋಗುತ್ತಿರುವುದನ್ನು ನೋಡಿದರೆ ಮನಕಲಕುತ್ತದೆ.
https://youtu.be/tVEeixVDgD0