LATEST NEWS
ಕ್ರೈಂ ಧಾರಾವಾಹಿ ನೋಡಿ ವೃದ್ಧೆಯ ಕೊಲೆ ಮಾಡಿದ ಬಾಲಕರು!
ಪುಣೆ, ನವೆಂಬರ್ 05: ಧಾರಾವಾಹಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಮಕ್ಕಳು, ಯುವಕರ ಮೇಲೆ ಬಹಳಷ್ಟು ಕೆಟ್ಟ ಪ್ರಭಾವ ಬೀರುತ್ತಿವೆ ಎನ್ನುವ ಮಾತಿದೆ. ಹಿಂದಿನಿಂದಲೂ ಇಂಥ ಘಟನೆಗಳು ನಡೆದುಕೊಂಡು ಬಂದಿವೆ. ಧಾರಾವಾಹಿ ಅದರಲ್ಲಿಯೂ ಕ್ರೈಂ ಧಾರಾವಾಹಿಗಳನ್ನು ನೋಡಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿ ಕೊಂಡ ವರದಿಗಳು ಬರುತ್ತಿರುವ ಬೆನ್ನಲ್ಲೇ ಬಾಲಕರಿಬ್ಬರು ಇಂಥದ್ದೇ ಕೃತ್ಯ ಮಾಡಿರುವ ಭಯಾಕ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯಲ್ಲಿ ವಾಸವಾಗಿರುವ 70 ವರ್ಷದ ವೃದ್ಧೆಯೊಬ್ಬರು ಬರ್ಬರವಾಗಿ ಹತ್ಯೆಯಾಗಿದ್ದರು. ಒಂಟಿಯಾಗಿ ವಾಸಿಸುತ್ತಿದ್ದ ಈ ವೃದ್ಧೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಜತೆಗೆ ನಗದನ್ನು ದೋಚಲಾಗಿತ್ತು. ಇದರ ಬೆನ್ನತ್ತಿ ಹೋದ ಪೊಲೀಸರಿಗೆ ಶಾಕ್ ಆಗಿತ್ತು. ಏಕೆಂದರೆ ಈ ಕೊಲೆ ಮಾಡಿದ್ದು 14 ಮತ್ತು 16 ವರ್ಷ ಮಕ್ಕಳು!
ಹೇಗೆಲ್ಲಾ ಕೊಲೆ ಮಾಡಬೇಕು, ಯಾರನ್ನು ಟಾರ್ಗೆಟ್ ಮಾಡಬೇಕು ಎಂಬ ಬಗ್ಗೆ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಮಕ್ಕಳು ವೃದ್ಧೆ ಒಂಟಿಯಾಗಿದ್ದ ಅವರ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಕ್ಕಳನ್ನು ಹಿಡಿದು ವಿಚಾರಿಸಿದಾಗ ಅವರು ಕೊಲೆ ಮಾಡಿರುವುದು ತಾವೇ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಅವರು ಕೊಟ್ಟಿರುವ ಕಾರಣ ಮಾತ್ರ ಪೊಲೀಸರನ್ನು ಕೂಡ ದಂಗುಬಡಿಸಿದೆ. ಅದೇನೆಂದರೆ ಹಿಂದಿಯ ಜನಪ್ರಿಯ ಕ್ರೈಂ ಥ್ರಿಲ್ಲರ್ ಷೋ ಎನಿಸಿರುವ ‘ಸಿಐಡಿ’ ನೋಡುತ್ತಿದ್ದ ಈ ಬಾಲಕರು ಅದರಿಂದ ಪ್ರೇರೇಪಣೆಗೊಂಡು ಈ ರೀತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಒಂದು ಕೊಲೆ ಪ್ರಕರಣವನ್ನು ಸಿಐಡಿ ತಂಡ ಭೇದಿಸಿದ ಬಳಿಕ ಕೊಲೆಗಾರರು ಹೇಗೆ ಕೊಲೆ ಮಾಡಿದರು, ಯಾವ ರೀತಿ ಸ್ಕೆಚ್ ಹಾಕಿಕೊಂಡಿದ್ದರು, ಯಾರನ್ನು ಟಾರ್ಗೆಟ್ ಮಾಡುತ್ತಿದ್ದರು ಎಂಬ ಬಗ್ಗೆ ಆ ಷೋ ನಲ್ಲಿ ತೋರಿಸಲಾಗಿತ್ತ. ಸುಲಭದಲ್ಲಿ ಶ್ರೀಮಂತರಾಗಲು ಈ ಉಪಾಯ ಬೆಸ್ಟ್ ಎನಿಸಿತು. ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಬೇಕು ಎಂದು ತಿಳಿದು ಈ ರೀತಿ ಮಾಡಿದೆವು ಎಂದು ಬಾಲಕರು ಬಾಯಿಬಿಟ್ಟಿದ್ದಾರೆ!
You must be logged in to post a comment Login