Connect with us

LATEST NEWS

ದ.ಕ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅಪರಾದ ಕೃತ್ಯ, ಶಾಂತಿ ಕದಡಲು ನಡೆಯುತ್ತಿದೆಯೇ ಷಡ್ಯಂತ್ರ…….

ಮಂಗಳೂರು ನವೆಂಬರ್ 2: ರಾಜ್ಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಸುವ ಘಟನೆಗಳು ನಡೆಯಲಾರಂಭಿಸಿದೆ. ಕೊಲೆ, ದರೋಡೆ ಪ್ರಕರಣಗಳು ಇತ್ತೀಚಿನ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಜಿಲ್ಲೆಯ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆಯೇ ಎನ್ನುವ ಅನುಮಾನಗಳು ಕಾಡಲಾರಂಭಿಸಿದೆ. ಕಳೆದ ಎರಡು ವಾರಗಳಿಂದ ಕೊಲೆ, ದರೋಡೆ, ಅತ್ಯಾಚಾರದಂತಹ ಪ್ರಕರಣಗಳೇ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಈ ಎಲ್ಲಾ ಪ್ರಕರಣಗಳು ಇದೀಗ ಕೋಮು ಬಣ್ಣ ಪಡೆಯುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ.

ಒಂದೆಡೆ ರೌಡಿಗಳ ಕಾಳಗವಾದರೆ, ಇನ್ನು ಕೆಲವು ಕಡೆಗಳಲ್ಲಿ ಸಮಾಜಘಾತುಕ ಶಕ್ತಿಗಳು ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. ಗಾಂಜಾ ಮಾರಾಟ, ಅಕ್ರಮ ದನ ಸಾಗಾಟ ಪ್ರಕರಣಗಳು ಮತ್ತೆ ಹೆಚ್ಚಾಗಲಾರಂಭಿಸಿದ್ದು, ಇದು ಎರಡು ಕೋಮುಗಳ ನಡುವೆ ಸಂಘರ್ಷಕ್ಕೂ ಕಾರಣವಾಗುವ ಲಕ್ಷಣಗಳು ಕಂಡು ಬರಲಾರಂಭಿಸಿದೆ. ಬಂಟ್ವಾಳ ತಾಲೂಕಿನ ಪರಂಗಿಪೇಟೆ ಎಂಬಲ್ಲಿ ಅಕ್ಟೋಬರ್ 28 ರಂದು ನಡೆದ ಫೋಟೋಗ್ರಾಫರ್ ಹಾಗೂ ಜಿಲ್ಲಾ ಬಿಜೆಪಿಯ ಕಾರ್ಯಕರ್ತ ದಿನೇಶ್ ಎಂಬಾತನ ಕೊಲೆ ಯತ್ನ ಜಿಲ್ಲೆಯಲ್ಲಿ ಮತ್ತೆ ಕೋಮುಗಲಭೆ ಭುಗಿಲೇಳಲು ಅನುವು ಮಾಡಿಕೊಡಲಿದೆಯೋ ಎನ್ನುವ ಸಂಶಯಗಳು ಮೂಡಲಾರಂಭಿಸಿದೆ.

ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಯಾಗ್ರಾಹಕ ದಿನೇಶ್ ಬಾಲಕಿಯ ಪರವಾಗಿ ನಿಂತಿರುವುದೇ ಈ ಕೊಲೆ ಯತ್ನಕ್ಕೆ ಕಾರಣ ಎನ್ನುವ ಮಾಹಿತಿಯನ್ನು ಪೋಲೀಸರೇ ನೀಡಿದ್ದಾರೆ. ಕೊಲೆ ಯತ್ನ ನಡೆಸಿದ ಆರೋಪಿಗಳು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿರುವ ಹಿನ್ನಲೆಯಲ್ಲಿ ಈ ಕೊಲೆ ಯತ್ನ ಇದೀಗ ಜಿಲ್ಲೆಯಲ್ಲಿ ಮತ್ತೆ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ ಎನ್ನುವ ಮಾಹಿತಿಗಳು ಲಭ್ಯವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯೂ ಹದಗೆಟ್ಟಿರುವುದಕ್ಕೆ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಘಟನೆಗಳು ಸಾಕ್ಷಿಯಾಗಿವೆ.

ತಿಂಡಿ ಕೊಡದೇ ಇದ್ದ ಹೋಟೇಲ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಲಾಗುತ್ತಿದೆ. ಜಿಲ್ಲೆಯ ಕೆಲವು ಪ್ರದೇಶಗಳಾದ ಉಳ್ಳಾಲ, ದೇರಳಕಟ್ಟೆ, ಬಿ.ಸಿ.ರೋಡ್ ಭಾಗದಲ್ಲಿ ರಸ್ತೆ ಸುರಕ್ಷತೆಯ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ಓಡಾಡುವುದು, ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುವುದು, ಮರಳು ಹಾಗೂ ಮಣ್ಣು ಸಾಗಾಟದ ಟಿಪ್ಪರ್ ಲಾರಿಗಳು ಯಾವುದೇ ಕಾನೂನಿನ ಭಯವಿಲ್ಲದೆ ಎಗ್ಗಿಲ್ಲದೆ ಸಂಚರಿಸುವುದು, ಕೊಲೆ ಆರೋಪಿಗಳು ಪೋಲೀಸರ ಮೇಲೆಯೇ ಹಲ್ಲೆಗೆ ಮುಂದಾಗುತ್ತಿರುವುದು ಈ ಎಲ್ಲಾ ಘಟನೆಗಳು ನಡೆಯುತ್ತಿದ್ದರೂ ಇವುಗಳನ್ನು ನಿಯಂತ್ರಿಸಬೇಕಾದ ಪೋಲೀಸ್ ಇಲಾಖೆ ಕಾರ್ಯಪ್ರವೃತ್ತವಾಗದಿರುವುದು ಜಿಲ್ಲೆಯಲ್ಲಿ ಕಾನೂನು ಭಂಜಕರಿಗೆ ವರದಾನವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಅಕ್ಟೋಬರ್ 30 ರಂದು ಮಂಗಳೂರಿನ ಹೋಟೇಲ್ ಒಂದರಲ್ಲಿ ನಡೆದ ಶೂಟೌಟ್ ಪ್ರಕರಣವು ಸೂಕ್ತ ಉದಾಹರಣೆಯೂ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸುವ ಮಟ್ಟಕ್ಕೆ ಇಳಿದಿರುವುದು ಹಾಗೂ ಗನ್ ಹಿಡಿದು ಸಾರ್ವಜನಿಕವಾಗಿ ತಿರುಗಾಡುತ್ತಿರುವುದು ಕಾನೂನಿನ ಭಯವಿಲ್ಲದಿರುವುದೇ ಕಾರಣ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಹನುಮಂತ್ ಕಾಮತ್. ಈ ನಡುವೆ ಜಿಲ್ಲೆಯಲ್ಲಿ ಶಾಂತಿ ಭಂಗ ತರುವ ವ್ಯವಸ್ಥಿತ ಷಡ್ಯಂತ್ರವೂ ನಡೆಯುತ್ತಿದೆ ಎನ್ನುವುದಕ್ಕೆ ಹೆಚ್ಚಾಗುತ್ತಿರುವ ಇಂಥ ಪ್ರಕರಣಗಳೇ ಸಾಕ್ಷಿ ಎನ್ನುವಂತಿದ್ದು, ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಪರಿಸ್ಥಿತಿ ಕೈ ಮೀರುವ ಸಾಧ್ಯತೆಯೂ ಹೆಚ್ಚಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *