LATEST NEWS
ವರ್ಣಭೇದ ನೀತಿ ಕ್ರಿಕೆಟ್ ಹೊರತಾಗಿಲ್ಲ – ಕ್ರಿಸ್ ಗೈಲ್
ಅಮೆರಿಕಾದ ಜನಾಂಗೀಯ ದ್ವೇಷಕ್ಕೆ ಗೈಲ್ ಆಕ್ರೋಶ
ನವದೆಹಲಿ, ಜೂನ್ 2, ಜನಾಂಗೀಯ ನಿಂದನೆ ಕ್ರಿಕೆಟ್ ಹೊರತಾಗಿಲ್ಲ. ನಾನೂ ಕೂಡ ಅಂಥ ನಿಂದನೆ, ಕಿರುಕುಳವನ್ನು ಅನುಭವಿಸಿದ್ದೇನೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೈಲ್ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕಾದಲ್ಲಿ ಅಫ್ರಿಕನ್ ಮೂಲದ ನೀಗ್ರೋನನ್ನು ಅಲ್ಲಿನ ಬಿಳಿಯ ಪೊಲೀಸ್ ಅಧಿಕಾರಿ ಕಪ್ಪು ವರ್ಣೀಯ ಎನ್ನುವ ಕಾರಣಕ್ಕೆ ಹಿಂಸಿಸಿ ಸಾಯಿಸಿದ ವಿಚಾರದಲ್ಲಿ ಭಾರೀ ಪ್ರತಿಭಟನೆ ಹೊತ್ತಿಕೊಂಡಿರುವ ಸಂದರ್ಭದಲ್ಲೇ ಕ್ರಿಸ್ ಗೈಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ20 ಕ್ರಿಕೆಟ್ ಟೂರ್ನಮೆಂಟ್ ಗಳಿಗಾಗಿ ಜಗತ್ತಿನ ವಿವಿಧ ದೇಶಗಳಿಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಇಂಥ ಕಿರುಕುಳ ಅನುಭವಿಸಿದ್ದೇನೆ. ನಾನು ಕಪ್ಪು ವರ್ಣೀಯ ಎನ್ನುವುದಕ್ಕಾಗಿ ಈ ಹಿಂಸೆ ಅನುಭವಿಸುತ್ತಿದ್ದೆ. ಇಂಥ ಹಿಂಸೆ, ಕಿರುಕುಳ ಅನುಭವಿಸಿದವರ ಲಿಸ್ಟ್ ದೊಡ್ಡದಿದೆ ಎಂದು ಕ್ರಿಸ್ ಗೈಲ್ ಹೇಳಿದ್ದಾರೆ.
ವರ್ಣಭೇದ ನೆಲೆಯಲ್ಲಿ ಕಿರುಕುಳ ಫುಟ್ಬಾಲ್ ನಲ್ಲಿ ಮಾತ್ರ ಇರುವುದಲ್ಲ. ಅದು ಕ್ರಿಕೆಟಿನಲ್ಲೂ ಇದೆ. ಅಂಥ ಪ್ರಸಂಗಗಳನ್ನು ಸ್ವತಃ ನಾನೇ ಹಲವು ಬಾರಿ ಅನುಭವಿಸಿದ್ದೇನೆ. ಬ್ಲಾಕ್ ಮೇನ್ ಅನ್ನುವ ಕಾರಣಕ್ಕೆ ಟಿ ಟ್ವಿಂಟಿಗಳಲ್ಲಿ ಕೊನೆಯ ಕ್ರಮಾಂಕದಲ್ಲಿ ಅವಕಾಶ ಪಡೆಯುತ್ತಿದ್ದೆ. ಆದರೆ ಕಪ್ಪಗಿನ ಬಣ್ಣ ಇರುವುದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ. ಕಪ್ಪು ಅಂದರೆ ಹೆಮ್ಮೆ. ಕಪ್ಪು ಅಂದರೆ ಪವರ್ ಫುಲ್ ಅಂತಾ ಕ್ರಿಸ್ ಗೈಲ್ ತನ್ನ ಇನ್ ಸ್ಟಾ ಗ್ರಾಮ್ ನಲ್ಲಿ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಕಪ್ಪಗಿನ ಜನರನ್ನು ಮೂರ್ಖರೆಂದು ಭಾವಿಸದಿರಿ. ಕಪ್ಪು ವರ್ಣೀಯರು ತುಂಬ ಪ್ರಾಮಾಣಿಕರು. ವರ್ಣದ ಕಾರಣಕ್ಕಾಗಿ ನಿಂದಿಸುವುದನ್ನು ನಿಲ್ಲಿಸಿ ಎಂದು ಅಮೆರಿಕನ್ನರಿಗೆ ತಿರುಗೇಟು ನೀಡಿದ್ದಾರೆ.
ಅಮೆರಿಕದಲ್ಲಿ ಅಫ್ರಿಕಾ ಕಪ್ಪು ವರ್ಣೀಯನನ್ನು ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯೊಬ್ಬ ಹಿಂಸಿಸಿ ಸಾಯಿಸಿದ್ದು ದೊಡ್ಡ ಜನಾಂದೋಲನಕ್ಕೆ ಸಾಕ್ಷಿಯಾಗಿದೆ. ಅಲ್ಲಿನ ಜನರು ವರ್ಣಭೇದ ಮರೆತು ಘಟನೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದು, ಹಿಂಸಾರೂಪಕ್ಕೆ ತಿರುಗಿದೆ. ದೇಶದ 40 ನಗರಗಳಲ್ಲಿ ಕರ್ಫ್ಯೂ ವಿಧಿಸಿದ್ದು, ಜನರನ್ನು ಹತ್ತಿಕ್ಕಲು ಅಮೆರಿಕ ಸರಕಾರ ಸೇನಾ ಸಿಬಂದಿಯನ್ನು ಜಮಾವಣೆ ಮಾಡಿದೆ.