LATEST NEWS
ಭಾರತದಲ್ಲಿ ಶುರುವಾಗಲಿದೆ ಕ್ರ್ಯಾಶ್ ಟೆಸ್ಟಿಂಗ್ – ಕ್ರ್ಯಾಶ್ ಟೆಸ್ಟ್ ಆಧರಿಸಿ ವಾಹನಗಳಿಗೆ ರ್‍ಯಾಂಕಿಂಗ್: ನಿತಿನ್ ಗಡ್ಕರಿ
ನವದೆಹಲಿ, ಜೂನ್ 25: ಭಾರತದಲ್ಲಿ ವಾಹನಗಳಿಗೆ ಕ್ರಾಶ್ ಟೆಸ್ಟ್ ನಡೆಸಿ, ಅದರ ಆಧಾರದಲ್ಲಿ ರ್‍ಯಾಂಕಿಂಗ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಮ್ (ಭಾರತ್ ಎನ್‌ಸಿಎಪಿ) ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕೆಲಸ ಮಾಡಲಿದೆ. ಸ್ಟಾರ್ ರೇಟಿಂಗ್ಸ್ ಆಧಾರದ ಮೇಲೆ ಸುರಕ್ಷಿತವಾದ ಕಾರು ಆಯ್ಕೆ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತದೆ. ಸುರಕ್ಷಿತವಾದ ವಾಹನಗಳನ್ನು ತಯಾರಿಸುವಂತೆ ತಯಾರಕರ ಮಧ್ಯೆ ಆರೋಗ್ಯಕರ ಪೈಪೋಟಿಗೂ ಉತ್ತೇಜನ ನೀಡುತ್ತದೆ’ ಎಂದು ತಿಳಿಸಿದ್ದಾರೆ.
I have now approved the Draft GSR Notification to introduce Bharat NCAP (New Car Assessment Program), wherein automobiles in India shall be accorded Star Ratings based upon their performance in Crash Tests. @PMOIndia
— Nitin Gadkari (@nitin_gadkari) June 24, 2022
‘ಭಾರತ್ ಎನ್‌ಸಿಎಪಿ ಪರಿಚಯಿಸಲು ಕರಡು ಜಿಎಸ್‌ಆರ್‌ನ ಅಧಿಸೂಚನೆಗೆ ಒಪ್ಪಿಗೆ ನೀಡಿದ್ದೇನೆ. ಅದರಂತೆ, ಕ್ರಾಶ್ ಟೆಸ್ಟ್‌ನಲ್ಲಿ ವಾಹನದ ಸಾಮರ್ಥ್ಯವನ್ನು ಆಧರಿಸಿ ಅದಕ್ಕೆ 1ರಿಂದ 5ರವರೆಗೆ ರ್‍ಯಾಂಕಿಂಗ್ ನೀಡಲಾಗುವುದು’ ಎಂದು ಹೇಳಿದ್ದಾರೆ. ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಷ್ಟೇ ಅಲ್ಲದೆ, ಭಾರತದ ವಾಹನೋದ್ಯಮದ ರಫ್ತು ಯೋಗ್ಯತೆಯನ್ನು ಇನ್ನಷ್ಟು ಹೆಚ್ಚಿಸಲು ಕೂಡ ಈ ವ್ಯವಸ್ಥೆಯು ಬಹಳ ಮುಖ್ಯವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.
ಭಾರತ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ಜಾಗತಿಕ ನಿಯಮಾವಳಿಗೆ ಅನುಗುಣವಾಗಿಯೇ ಇದೆ. ದೇಶದಲ್ಲಿಯೇ ವಾಹನಗಳ ಪರೀಕ್ಷೆ ನಡೆಸಿ ಪ್ರಮಾಣಪತ್ರ ಪಡೆಯಲು ತಯಾರಕರಿಗೆ ಅವಕಾಶ ಲಭ್ಯವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.