LATEST NEWS
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ಮಂಗಳೂರು ನವೆಂಬರ್ 04: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ದೀಪಾವಳಿ, ತುಳಸಿಪೂಜೆ ಮತ್ತು ಕ್ರಿಸ್ಮಸ್ ಹಬ್ಬಗಳ ಸಂಧರ್ಭದಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ನಿಯಂತ್ರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕರಲ್ಲಿ ಆದೇಶ ಮತ್ತು ನಿರ್ದೇಶನ ನೀಡಿದೆ.
ಹಬ್ಬಗಳ ಸಂದರ್ಭದಲ್ಲಿ ಹಸಿರು ಪಟಾಕಿಗಳು ಮಾತ್ರ ಬಳಸಬೇಕು, ಪಟಾಕಿಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿ, ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗದಂತೆ ಬಳಸಬೇಕು. ಪಟಾಕಿ ಹಚ್ಚುವ ವೇಳೆ ಯಾವುದೇ ಸ್ಥಳೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆ ಸುತ್ತಮುತ್ತಲಿನ ಹಾಗೂ ನಿಷೇಧಿತ ವಲಯದಲ್ಲಿ ಬಳಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ.
ಹಸಿರು ಪಟಾಕಿಗಳ ಮೇಲೆ ಮತ್ತು ಪ್ಯಾಕೇಟ ಮೇಲೆ ಹಸಿರು ಪಟಾಕಿ ಚಿಹ್ನೆ ಇರುತ್ತದೆ ಹಾಗೂ ಕ್ಯೂಆರ್ ಕೋಡ ಸಹ ಇರುತ್ತದೆ ಇವು ಹಸಿರು ಪಟಾಕಿಗಳೆಂದು ಗುರುತಿಸಬಹುದು. ಹಬ್ಬಗಳ ಸಂಧರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಸಿರು(ಕಡಿಮೆ ಶಬ್ದ ಮಾಡುವ ) ಪಟಾಕಿ, ಸುಡುಮದ್ದು ಸಿಡಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿ ಸುಡುಮದ್ದುಗಳನ್ನು ಸಿಡಿಸುವುದು ನಿಷೇಧಿಸಲಾಗಿದೆ. ಕಡ್ಡಾಯವಾಗಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಮಹಾನಗರಪಾಲಿಕೆಯ ಉಪ ಆಯುಕ್ತರು(ಕಂದಾಯ) ಪ್ರಕಟಣೆಯಲ್ಲಿ ತಿಳಸಿದ್ದಾರೆ.