DAKSHINA KANNADA
ಕುಂಪಲ – ಬಗಂಬಿಲ ನಡುವೆ ಓಡಾಡುವ ಖಾಸಗಿ ,ಸರಕಾರಿ ಬಸ್ಸುಗಳ ಟ್ರಿಪ್ ಕಡಿತ ಸಮಸ್ಯೆಗಳನ್ನು ಸರಿಪಡಿಸಲು CPIM ಮನವಿ

ಮಂಗಳೂರು ಮಾರ್ಚ್ 21: ಕುಂಪಲ – ಬಗಂಬಿಲ ನಡುವೆ ಓಡಾಡುವ ಖಾಸಗಿ ಸರಕಾರಿ ಬಸ್ಸುಗಳ ಟ್ರಿಪ್ ಕಡಿತ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ( ಮಾರ್ಕ್ಸ್‌ವಾದಿ) ಕುಂಪಲ ಶಾಖೆಯ ಉನ್ನತ ಮಟ್ಟದ ನಿಯೋಗವೊಂದು ಇಂದು(21-03-2025) ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಹಾಗೂ KSRTC ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು.
ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ ಪ್ರದೇಶವು ಸಾವಿರಾರು ಜನವಸತಿ ಇರುವ ಊರಾಗಿದೆ. ಇಲ್ಲಿ ಬಹುತೇಕ ದುಡಿಯುವ ವರ್ಗದ ಜನರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಇವರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ,ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ರೋಗಿಗಳು ಆಸ್ಪತ್ರೆಗಳಿಗೆ ತೆರಳಲು ಊರಿನ ಸ್ಥಳೀಯ ಬಸ್ ಗಳನ್ನೇ ಅತೀ ಹೆಚ್ಚು ಆಶ್ರಯಿಸಿರುತ್ತಾರೆ.ಈ ಭಾಗದಲ್ಲಿ ಈವರೆಗೆ ಸಂಚರಿಸುತ್ತಿದ್ದ 44E ನಂಬರಿನ ನಾಲ್ಕು ಖಾಸಗಿ ಬಸ್ ಗಳು ಹಾಗೂ ಒಂದು ಸರಕಾರಿ ಬಸ್ ಗಳು ಕಳೆದ 4 ತಿಂಗಳುಗಳಿಂದ ಆರ್.ಟಿ.ಓ ನಿಗಧಿಪಡಿಸಿದ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿಯಿಂದಾಗಿ ಉಂಟಾಗಿರುವ ಸಮಸ್ಯೆಗಳನ್ನು ನೆಪವಾಗಿಟ್ಟುಕೊಂಡು ತನ್ನ ಸಂಚಾರವನ್ನು ನಿಲ್ಲಿಸಲಾಗಿದ್ದ ಬಸ್ಸುಗಳು ನೀರಿನ ಪೈಪ್ ಹಾಕಿದ ನಂತರವೂ ಸಂಚರಿಸದ ಕಾರಣ ಈ ಭಾಗದ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು CPIM ಆರೋಪಿಸಿದೆ.
ಖಾಸಗಿ ಬಸ್ಸುಗಳು ಬೆಳಿಗ್ಗೆ 10 ಗಂಟೆಯವರೆಗೆ ಕೆಲವು ಟ್ರಿಪ್ ಗಳನ್ನು ನಡೆಸಿದ ಬಳಿಕ ಸಂಜೆ ಒಂದೆರಡು ಟ್ರಿಪ್ ಗಳನ್ನು ನಡೆಸುತ್ತಾರೆ ಹೊರತು ಮಧ್ಯದ ಉಳಿದ ಅವಧಿಯಲ್ಲಿ ಟ್ರಿಪ್ ಗಳನ್ನು ಏಕಾಏಕಿ ಕಡಿತಗೊಳಿಸಿರುತ್ತಾರೆ. ಸರಕಾರಿ ಬಸ್ ಕೂಡ ಇದಕ್ಕೆ ಹೊರತಾಗಿಲ್ಲ. ಈ ರೀತಿ ಬಸ್ಸುಗಳು ಬೇಕಾಬಿಟ್ಟಿ ಸಂಚರಿಸುವ ಮೂಲಕ ಸೃಷ್ಟಿಯಾಗಿರುವ ಸಮಸ್ಯೆಗಳಿಂದ ಊರ ಪ್ರಯಾಣಿಕರು ಬಹಳ ತೊಂದರೆ ಅನುಭವಿಸುವಂತಾಗಿದೆ. ಸದ್ರಿ ಜನಸಾಮಾನ್ಯರು ತಮ್ಮ ಗಳಿಕೆಯ ಬಹುತೇಕ ಹಣವನ್ನು ಆಟೋ ಪ್ರಯಾಣಕ್ಕಾಗಿ ವ್ಯಯಿಸುವಂತಾಗಿದೆ.ಒಟ್ಟಿನಲ್ಲಿ ಶ್ರಮಜೀವಿಗಳು ಬಹುತೇಕ ಸಂಖ್ಯೆಯಲ್ಲಿ ನೆಲೆಸಿರುವ ಕುಂಪಲ ಪ್ರದೇಶದ ಕಡಿಮೆ ಆದಾಯಕ್ಕೆ ದುಡಿಯುವ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಸೇರಿದಂತೆ ಸಾವಿರಾರು ಜನತೆಗೆ ದಿನವಿಡೀ ಉಪಯೋಗವಾಗಬೇಕಾಗಿದ್ದ ಸ್ಥಳೀಯ ರೂಟಿನ ಬಸ್ಸುಗಳು ತಮಗೆ ಇಷ್ಟ ಬಂದಂತೆ ಟ್ರಿಪ್ ಕಡಿತ ಮಾಡುತ್ತಿರುವುದು ಸಾರಿಗೆ ಪ್ರಾಧಿಕಾರದ ನಿಯಮದ ಉಲ್ಲಂಘನೆಯಾಗಿದೆ ಎಂದು CPIM ತನ್ನ ಮನವಿಯಲ್ಲಿ ತಿಳಿಸಿದೆ.

ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ಈ ಕೂಡಲೇ ಮಧ್ಯೆ ಪ್ರವೇಶಿಸಿ ಕುಂಪಲ ಪ್ರದೇಶದಲ್ಲಿ ಸಂಚರಿಸುತ್ತಿರುವ ಎಲ್ಲಾ ಖಾಸಗಿ ಬಸ್ ಗಳು RTO ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ದಿನದ ಎಲ್ಲಾ ಟ್ರಿಪ್ ಗಳನ್ನು ನಡೆಸುವಂತೆ, ಆ ಮೂಲಕ ಕುಂಪಲ ಬಗಂಬಿಲ ಪ್ರದೇಶದ ಜನಸಾಮಾನ್ಯರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು, ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಬ್ರಹತ್ ಹೋರಾಟವನ್ನು ನಡೆಸಲಾಗುವುದು ಎಂದು CPIM ಎಚ್ಚರಿಕೆ ನೀಡಿದೆ.
1 Comment