LATEST NEWS
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ – ಮೂವರು ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರು ಫೆಬ್ರವರಿ 01: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ಪೊಕ್ಕೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಮತ್ತು ₹1.65 ಲಕ್ಷ ದಂಡ ವಿಧಿಸಿದೆ.
ಶಿಕ್ಷೆಗೊಳಗಾದವರನ್ನು ಮೂಳೂರು ಗ್ರಾಮ ಕಿನ್ನಿ ಕಂಬಳ ಮಸೀದಿ ಸಮೀಪದ ನಿವಾಸಿ ಮೊಹಮ್ಮದ್ ಶಾಕೀರ್ (26), ಬಂಟ್ವಾಳ ತಾಲ್ಲೂಕು ಕೈಕಂಬದ ಅಭಿಜಿತ್ (27), ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಕುಕ್ಕುಂದೂರಿನ ಅಬ್ದುಲ್ ಸಮದ್ (32) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಬಸ್ ನಿಲ್ದಾಣದಲ್ಲಿ ನಿಂತಿದ್ದ 16 ವರ್ಷದ ಬಾಲಕಿಯೊಬ್ಬಳಿಗೆ ಹೊಸ ಬಟ್ಟೆ ಮತ್ತು ಮೊಬೈಲ್ ಫೋನ್ ಕೊಡಿಸುವ ಆಮಿಷವೊಡ್ಡಿ 2021 ಡಿಸೆಂಬರ್ 7ರಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವಸತಿಗೃಹವೊಂದರಲ್ಲಿ ಬಾಲಕಿಯನ್ನು ಕೂಡಿಹಾಕಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು.
ಬಳಿಕ ಆಕೆಯನ್ನು ನಾಟೆಕಲ್‌ಗೆ ಕರೆದುಕೊಂಡು ಬಂದು, ಅಭಿಜಿತ್ ಜೊತೆ ಕಳುಹಿಸಿದ್ದರು. ಆತ ಕಂಬಪದವಿನ ಅಪಾರ್ಟ್‌ಮೆಂಟ್‌ವೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ನಡೆಸಿದ್ದ. ನಂತರ ಬಂದ ಮೊಹಮ್ಮದ್ ಶಾಕೀರ್ ಮತ್ತು ಅಬ್ದುಲ್ ಸಮದ್ ಕೂಡ ಅತ್ಯಾಚಾರ ಮಾಡಿದ್ದ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್‌ಸ್ಪೆಕ್ಟರ್ ಸಂದೀಪ್ ಅವರು ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಾನು ಅವರು, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ವಕೀಲ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.