FILM
ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ
ಕಾಂತಾರ ಸಿನೆಮಾಗೆ ಈಗ ಸಂಕಷ್ಟ ಎದುರಾಗಿದ್ದು, ಸಿನೆಮಾದ ಪ್ರಮುಖ ಹಾಡನ್ನು ಬಳಸದಂತೆ ಕೇರಳದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಬರುವ ‘ವರಾಹ ರೂಪಂ’ ಹಾಡನ್ನು ಸಿನಿಮಾದಲ್ಲಿ ಬಳಸದಂತೆ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಬಂಧ ಹೇರಿದೆ.
ಈ ಹಾಡನ್ನು ನಾನು ಯಾವುದರಿಂದಲೂ ಕದ್ದಿಲ್ಲ ಎಂದು ಈಗಾಗಲೇ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದರು. ಆದರೂ, ಕೇರಳದ ಕೊಯಿಕ್ಕೋಡು ಕೋರ್ಟ್ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿದೆ. ಕೇರಳದ ತೈಕುಡಂ ಬಿಡ್ಜ್ ಬ್ಯಾಂಡ್ ಕಾಂತಾರ ಸಿನಿಮಾದ ವರಾಹ ರೂಪಂ ಹಾಡನ್ನು ತಮ್ಮ ಬ್ಯಾಂಡ್ ನ ಹಾಡಿನಿಂದ ಕದಿಯಲಾಗಿದೆ ಎಂದು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿತ್ತು. ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿಯೂ ತಿಳಿಸಿತ್ತು. ಹಾಗಾಗಿ ತಂಡವು ಕೊಯಿಕ್ಕೋಡು ಕೋರ್ಟ್ ಗೆ ಮೊರೆ ಹೋಗಿತ್ತು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೈಕ್ಕುಡಂ ಬ್ರಿಡ್ಜ್ ನ ಅನುಮತಿ ಇಲ್ಲದೇ ಈ ಹಾಡನ್ನು ಬಳಸುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.
ಕೋರ್ಟ್ ಆದೇಶದಲ್ಲಿ ವರಾಹ ರೂಪಂ ಹಾಡಿನ ಪ್ರಸಾರ ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಕಾಂತಾರ ಚಿತ್ರತಂಡಕ್ಕೆ ಸೂಚಿಸಿದೆ. ಜತೆಗೆ, ಬ್ಯಾಂಡ್‌ನ ಒಪ್ಪಿಗೆಯಿಲ್ಲದೇ ಹಾಡನ್ನು ಬಳಸಬಾರದು ಎಂದು ಅಮೆಜಾನ್, ಯೂಟ್ಯೂಬ್, ನ್ಪೋಟಿಫೈ, ಜಿಯೋಸಾವನ್ ಮತ್ತು ಇತರೆ ಸಂಗೀತ ವಿತರಣಾ ಪ್ಲಾಟ್‌ಫಾರಂಗಳಿಗೆ ನಿರ್ದೇಶನ ನೀಡಿದೆ. ಸದ್ಯ ಚಿತ್ರತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.