LATEST NEWS
ಎರಡನೇ ಮದುವೆಯಾಗಿ ಪತ್ನಿಗೆ ವಂಚಿಸಿದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಿದ ಕೋರ್ಟ್
ಎರಡನೇ ಮದುವೆಯಾಗಿ ಪತ್ನಿಗೆ ವಂಚಿಸಿದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಿದ ಕೋರ್ಟ್
ಉಡುಪಿ ಮಾರ್ಚ್ 27: ಎರಡನೇ ವಿವಾಹವಾಗಿ ಅಮಾಯಕ ಯುವತಿಯನ್ನು ವಂಚಿಸಿದ್ದ ಪತಿಯ ವಿದೇಶ ಪ್ರಯಾಣಕ್ಕೆ ತಡೆ ನೀಡಲು ಕುಂದಾಪುರ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರು ಪಾಸ್ ಪೋರ್ಟ್ ಕಚೇರಿಗೆ ಆದೇಶ ನೀಡಿದ್ದಾರೆ.
ಈ ಕುರಿತಂತೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾನವಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರ ಶ್ಯಾನುಭಾಗ್ ವಿದೇಶದಲ್ಲಿ ಉದ್ಯೋಗದಲ್ಲಿರುವ ಜಗದೀಶ್ 2012ರಲ್ಲಿ ಐರೋಡಿ ಗ್ರಾಮದ ಅಮಿತಾ ಎಂಬ ಯುವತಿಯನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ನಂತರ ಆಕೆಯೊಂದಿಗೆ ಸರಿಯಾಗಿ ಸಂಸಾರ ನಡೆಸುತ್ತಿರಲಿಲ್ಲ. ಅನಂತರ ಕೆಲವು ವರ್ಷಗಳ ಹಿಂದೆ ಪತ್ನಿ ಅಮಿತಾಳಿಗೆ ಜಗದೀಶ್ ಗೆ ಬೆರೊಂದು ವಿವಾಹ ಮಾಡಿಕೊಂಡಿರುವುದು ತಿಳಿಯಿತು.
ಈ ಹಿನ್ನಲೆಯಲ್ಲಿ ಎರಡೂ ಕುಟುಂಬದ ಹಿರಿಯರ ನಡುವೆ ಸಂಧಾನ ನಡೆದು ಜಗದೀಶ್ ನು ಅಮಿತಾಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಕೋರ್ಟ್ ಮೂಲಕ ಮದುವೆ ವಿಚ್ಚೇದನ ಪಡೆಯಬೇಕೆಂದು ಮಧ್ಯಸ್ಥಿಕೆ ಆಗಿತ್ತು. ಈ ಹಿನ್ನಲೆಯಲ್ಲಿ ಹಿರಿಯರ ತೀರ್ಮಾನದಂತೆ ಮೊದಲ ಕಂತು 10 ಲಕ್ಷ ರೂಪಾಯಿಯನ್ನು ಜಗದೀಶ್ ತನ್ನ ಪತ್ನಿ ಅಮಿತಾಳಿಗೆ ಪಾವತಿಸಿದ್ದ,
ಅನಂತರ ಪರಸ್ಪರ ಒಪ್ಪಿಗೆ ಮೂಲಕ ವಿಚ್ಚೇದನಕ್ಕಾಗಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಗದೀಶ್ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನದ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದ, ಅಲ್ಲದೇ ಬಾಕಿ ನೀಡಬೇಕಾಗಿದ್ದ 15 ಲಕ್ಷ ರೂಪಾಯಿ ಹಣವನ್ನು ನೀಡಿರಲಿಲ್ಲ.
ಈ ಹಿನ್ನಲೆಯಲ್ಲಿ ಅಮಿತಾ ಮತ್ತು ಆಕೆಯ ಹೆತ್ತವರು ಮಾನವ ಹಕ್ಕುಗಳ ಅನುಷ್ಠಾನಕ್ಕೆ ದೂರು ನೀಡಿ ಸಹಕಾರ ಯಾಚಿಸಿದರು. ಅನಂತರ ಪ್ರತಿಷ್ಠಾನದಿಂದ ಕಾನೂನು ನೆರವು ನೀಡಲಾಯಿತು ಎಂದು ತಿಳಿಸಿದರು.
ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಯವರಿಗೆ ನಿರ್ದೇಶನ ನೀಡಿ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಅದರಂತೆ ಕೋರ್ಟ್ ಜಗದೀಶ್ ಅವರ ವಿದೇಶ ಪ್ರಯಾಣಕ್ಕೆ ತಡೆ ನೀಡಿ ಆದೇಶಿಸಿದೆ. ಅಲ್ಲದೆ ಮಧ್ಯಂತರ ಪರಿಹಾರವಾಗಿ ಅನಿತಾ ಅವರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣವನ್ನು ನೀಡಲು ಆದೇಶಿಸಿದೆ.