KARNATAKA
ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿಸಂಸ್ಥೆಗಳು ಮಾಡಿರುವ ವರದಿಯನ್ನು ಡಿಲಿಟ್ ಮಾಡಲು ಕೋರ್ಟ್ ಸೂಚನೆ

ಬೆಂಗಳೂರು ಜುಲೈ 21: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವ್ಯಕ್ತಿ ದಾಖಲು ಮಾಡಿರುವ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿಸಂಸ್ಥೆಗಳು ಮಾಡಿರುವ ವರದಿಯನ್ನು ಡಿಲಿಟ್ ಮಾಡಲು ಬೆಂಗಳೂರಿನ ಕೋರ್ಟ್ ಆದೇಶ ಹೊರಡಿಸಿದೆ. ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನವು ನಡೆಸುತ್ತಿರುವ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 10 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯ ಕುಮಾರ್ ರೈ ಈ ಆದೇಶವನ್ನು ಹೊರಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ ಗಳಲ್ಲಿರುವ ಒಟ್ಟು 8,812 ಲಿಂಕ್‌ಗಳನ್ನು “ಅಳಿಸಿ/ಸೂಚ್ಯಂಕ ತೆಗೆದುಹಾಕಿ” (delete/de-index) ಮಾಡಲು ಬೆಂಗಳೂರಿನ ನ್ಯಾಯಾಲಯವು ಮಾಧ್ಯಮ ಸಂಸ್ಥೆಗಳು, ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಸೇರಿದಂತೆ 332 ಪ್ರತಿವಾದಿಗಳ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಎಕ್ಸ್-ಪಾರ್ಟೆ ಆಡ್-ಇಂಟರ್ರಿಮ್ ಕಡ್ಡಾಯ ತಡೆಯಾಜ್ಞೆಯನ್ನು ಹೊರಡಿಸಿದ್ದಾರೆ.

ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿದಾರರಿಗೆ ಸರಿಪಡಿಸಲಾಗದ ಧಕ್ಕೆ ಮತ್ತು ಖ್ಯಾತಿಗೆ ಹಾನಿಯಾಗುವ ಸಾಧ್ಯತೆಯನ್ನು ಉಲ್ಲೇಖಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಿಷಯವನ್ನು ಪೋಸ್ಟ್ ಮಾಡುವುದನ್ನು ಅಥವಾ ಹಂಚಿಕೊಳ್ಳುವುದನ್ನು ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳು ಮಾಡದಂತೆ ನಿರ್ಬಂಧಿಸಿದರು.
ಹರ್ಷೇಂದ್ರ ಕುಮಾರ್ ಅವರು ಹೂಡಿರುವ ಮಾನಹಾನಿ ದಾವೆಯಲ್ಲಿ 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳನ್ನು ಒಳಗೊಂಡಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ನ್ಯಾಯಾಲಯದ ಮುಂದೆ, ಕುಮಾರ್ ಅವರು ತಮ್ಮ ಹಾಗೂ ತಮ್ಮ ಕುಟುಂಬ, ದೇವಾಲಯ ಮತ್ತು ಅದರ ಸಂಸ್ಥೆಗಳ ವಿರುದ್ಧ ಆನ್‌ಲೈನ್ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಮತ್ತು ಮಾನಹಾನಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಸಕ್ತ ಪ್ರಥಮ ವರ್ತಮಾನ ವರದಿಯಲ್ಲಿ (ಎಫ್‌ಐಆರ್) ತಮ್ಮ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದಿದ್ದಾರೆ. ಈ ಹಿಂದೆ 2012ರಲಿ ದಾಖಲಾಗಿದ್ದ ಎಫ್‌ಐಆರ್ ಒಂದರಲ್ಲಿ ಖುಲಾಸೆಯಾಗಿರುವುದಾಗಿ ತಿಳಿಸಿದ್ದಾರೆ.