Connect with us

KARNATAKA

ಕೆಲಸದಾಕೆಯ ಮೇಲೆ ರೇಪ್‌ – ಪ್ರಜ್ವಲ್‌ ರೇವಣ್ಣ ದೋಷಿ ಎಂದು ಕೋರ್ಟ್‌ ತೀರ್ಪು

ಬೆಂಗಳೂರು, ಆಗಸ್ಟ್ 01: ಕೆ.ಆರ್.ನಗರದಲ್ಲಿ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ನ್ಯಾ. ಗಜಾನನ ಭಟ್‌ ಭಟ್‌ ಅವರಿದ್ದ ಪೀಠ ಪ್ರಜ್ವಲ್‌ ದೋಷಿ ಎಂದು ತೀರ್ಪು ನೀಡಿದೆ. ತೀರ್ಪು ಪ್ರಕಟಿಸುವ ವೇಳೆ ಪ್ರಜ್ವಲ್‌ ರೇವಣ್ಣ ಕೂಡ ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದರು.  ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ.  ಕೋರ್ಟ್‌ ದೋಷಿ ಎಂದು ತೀರ್ಪು ನೀಡುವ ವೇಳೆ ಪ್ರಜ್ವಲ್‌ ರೇವಣ್ಣ  ಕಣ್ಣಿರಿಟ್ಟಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ, ಗರಿಷ್ಟ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.ಪ್ರಕರಣ

ಈ ಪ್ರಕರಣದ ಕೊನೆಯ ವಿಚಾರಣೆ ಜುಲೈ 30 ರಂದು ನಡೆದಿತ್ತು . ಸರ್ಕಾರಿ ಪರ ವಕೀಲ ಎನ್ ಜಗದೀಶ್ ಹಾಗೂ ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಅವರು ಹಾಜರಾಗಿದ್ದರು.

ತೀರ್ಪು ಕಾಯ್ದಿರಿಸಿದ್ದ ಕೋರ್ಟ್‌ ಮೊಬೈಲ್ ಸಾಕ್ಷ್ಯ, ತಾಂತ್ರಿಕ ಸಾಕ್ಷ್ಯಗಳ ಬಗ್ಗೆ ಸ್ಪಷ್ಟನೆ ಕೇಳಿತ್ತು. ಇದರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಗ್ಗೆ ನ್ಯಾಯಾಧೀಶರು ಕೆಲ ಮಾಹಿತಿ ಕೇಳಿ ಇಂದಿಗೆ ಮುಂದೂಡಿತ್ತು. ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಮಹತ್ವ ಪಡೆದಿದೆ. ಈ ಪ್ರಕರಣ ಅಲ್ಲದೇ ಇನ್ನೂ 2 ಪ್ರಕರಣದಲ್ಲಿ ತೀರ್ಪು ಬರಬೇಕಿದೆ.

ಏನಿದು ಪ್ರಕರಣ?‌
ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನ ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿ ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಇದೇ ಅಪಹರಣ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.

ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು. ಹೇಳಿಕೆಯ ಮೇಲೆ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಸ್‌ಎಸ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು.

ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳಿದ್ದ ಪೆನ್ ಡ್ರೈವ್‌ಗಳನ್ನ ಹಾಸನ ಕ್ಷೇತ್ರದಾದ್ಯಂತ ಹಂಚಲಾಗಿತ್ತು. ಬಳಿಕ ಹೊಳೆನರಸೀಪುರದ ಮಹಿಳೆಯೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣ ಅವರನ್ನ ಪೊಲೀಸರು ಬಂಧಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *