LATEST NEWS
ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ
ಆರೋಗ್ಯವಾದ ಮಗುವಿಗೆ ಜನ್ಮ ನೀಡಿದ ಕೊರೊನಾ ಪಾಸಿಟಿವ್ ಗರ್ಭಿಣಿ
ಮಂಗಳೂರು: ಮಹಾರಾಷ್ಟ್ರದಿಂದ ಮಂಗಳೂರಿಗೆ ಆಗಮಿಸಿದ ಕರೊನಾ ಸೋಂಕಿತ ಮಹಿಳೆಯೊಬ್ಬರು ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಾರಾಷ್ಟ್ರದಿಂದ ಜೂನ್ 8ರಂದು ಆಗಮಿಸಿದ್ದ 30 ವರ್ಷ ವಯಸ್ಸಿನ ಗರ್ಭಿಣಿಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಹಿನ್ನಲೆ ಲೇಡಿಗೋಶನ್ ಆಸ್ಪತ್ರೆಗೆ ಪರೀಕ್ಷೆಗಾಗಿ ಆಗಮಿಸಿದ್ದರು. ಈ ಸಂದರ್ಭ ಅವರನ್ನು ತಪಾಸಣೆಗೊಳಪಡಿಸಿದಾಗ ಅವರು ಮುಂಬೈನಿಂದ ಬಂದಿದ್ದಾಗಿ ತಿಳಿಸಿದ್ದರು, ಹಾಗಾಗಿ ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕ್ವಾರಂಟೈನ್ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಬುಧವಾರ ತಡರಾತ್ರಿ ಅವರ ಗಂಟಲ ದ್ರವದ ಮಾದರಿ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು.
ಗುರುವಾರ ಬೆಳಗ್ಗೆ ಹೆರಿಗೆ ನೋವು ಕಂಡುಬಂದಿದ್ದು, ವೈದ್ಯರು ಸಿಸೇರಿಯನ್ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಹುಟ್ಟಿದ ಮಗು 2.9 ಕೆ.ಜಿ ತೂಕವಿದ್ದು ಆರೋಗ್ಯವಂತವಾಗಿದೆ.
ಸಾಮಾನ್ಯವಾಗಿ ತಾಯಿಗೆ ಕರೊನಾ ಸೋಂಕು ಬಂದಿರುವುದರಿಂದ ಮಗುವಿನ ದೇಹದಲ್ಲಿ ಪ್ರತಿಕಾಯಗಳು ಬೆಳೆದಿರುತ್ತವೆ, ಹಾಗಾಗಿ ಸೋಂಕು ತಗಲುವ ಸಾಧ್ಯತೆ ಕಡಿಮೆ. ರಕ್ತದಲ್ಲಿ ಬರುವುದೂ ಇಲ್ಲ.
ತಾಯಿ ಮಗುವಿಗೆ ಎದೆಹಾಲು ನೀಡಲೇಬೇಕಾಗುತ್ತದೆ, ಹಾಗಾಗಿ ಒಟ್ಟಿಗೆ ಇರಿಸಲಾಗಿದೆ. ಮಗುವನ್ನು ಕೆಲದಿನ ಬಿಟ್ಟು ಪರೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.