LATEST NEWS
ಸಿಎಎ ಪ್ರತಿಭಟನೆಗೆ ಕರೊನಾ ವೈರಸ್ ಭೀತಿ !

ಸಿಎಎ ಪ್ರತಿಭಟನೆಗೆ ಕರೊನಾ ವೈರಸ್ ಭೀತಿ !
ಮಂಗಳೂರು, ಮಾರ್ಚ್ 4: ಚೀನಾ ದೇಶದಲ್ಲಿ ಪತ್ತೆಯಾದ ಕರೊನಾ ವೈರಸ್ ಇದೀಗ ವಿಶ್ವದಾದ್ಯಂತ ಶರವೇಗದಲ್ಲಿ ಹರಡಲಾರಂಭಿಸಿದೆ. ಭಾರತದಲ್ಲೂ ಇತ್ತೀಚಿನ ವರದಿಯ ಪ್ರಕಾರ ಸುಮಾರು 6 ಮಂದಿ ಕರೊನಾ ವೈರಸ್ ಸೋಂಕಿತರಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಒಂದು ಪ್ರಕರಣ ಪತ್ತೆಯಾಗಿದ್ದು, ರಾಜ್ಯದ ಜನರನ್ನು ಆತಂಕಕ್ಕೆ ತಳ್ಳಿದೆ.
ರಾಜ್ಯದೆಲ್ಲೆಡೆ ಇದೀಗ ಕರೊನಾ ವೈರಸ್ ಹರಡದಂತೆ ಕಟ್ಟೆಚ್ಟರ ವಹಿಸಲಾಗುತ್ತಿದೆ. ಕರೊನಾ ಎನ್ನುವ ವೈರಸ್ ಹರಡುತ್ತಿದೆ ಎನ್ನುವ ಎಚ್ಚರಿಕೆಯ ಮಧ್ಯೆಯೇ ಸಿಎಎ ವಿರೋಧಿ ಪ್ರತಿಭಟನೆಯನ್ನೂ ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಮಂಗಳೂರು ಹೊರವಲಯದ ಜಪ್ಪಿನಮೊಗರಿನಲ್ಲಿ ಮಾರ್ಚ್ 8 ರಂದು ಬೃಹತ್ ಸಿಎಎ ವಿರೋಧಿ ಪ್ರತಿಭಟನೆ ನಡೆಯಲಿದ್ದು, ಈ ಪ್ರತಿಭಟನೆಯಲ್ಲಿ ಕಮ್ಯುನಿಷ್ಟ್ ಪಕ್ಷದ ಮುಖಂಡ ಕನಯ್ಯ ಕುಮಾರ್ ದಿಕ್ಸೂಚಿ ಭಾಷಣವನ್ನೂ ಮಾಡಲಿದ್ದಾರೆ.
ಪ್ರತಿಭಟನೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಪಕ್ಕದ ಕಾಸರಗೋಡು ಜಿಲ್ಲೆಯಿಂದಲೂ ಜನ ಬರುವ ಸಾಧ್ಯತೆಯಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲೇ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದ್ದು, ರಸ್ತೆಯಲ್ಲಿ ಸಾಗುವ ದೂರದೂರಿನ ಪ್ರಯಾಣಿಕರೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯೂ ಇದೆ.
ಹೀಗೆ ಸಾವಿರಾರು ಸಂಖ್ಯೆಯಲ್ಲಿ ಸೇರುವ ಜನರ ಮಧ್ಯೆ ಓರ್ವ ಸೋಂಕು ಪೀಡಿತ ಸೇರಿಕೊಂಡರೂ ಜಿಲ್ಲೆಯ ಜನರಿಗೆ ಇದರಿಂದ ಆಪತ್ತು ಕಟ್ಟಿಟ್ಟ ಬುತ್ತಿಯಾಗಿದೆ. ಈ ರೀತಿಯ ಸಾಧ್ಯತೆಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.
ಜಿಲ್ಲೆಯಲ್ಲಿ ಈ ವರೆಗೆ ಕರೊನಾ ಸೋಂಕು ಪೀಡಿತರು ಯಾರೂ ಪತ್ತೆಯಾಗದ ಹಿನ್ನಲೆಯಲ್ಲಿ ಹೊರ ಜಿಲ್ಲೆಗಳಿಂದ ಪ್ರತಿಭಟನೆಗೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಬೇಕಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎನ್ನುವ ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.