LATEST NEWS
ಕೊರೊನಾ ನೆಗೆಟಿವ್ ವರದಿ ಇಲ್ಲದೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ 51 ಮಂದಿ ಕ್ವಾರಂಟೈನ್
ಮಂಗಳೂರು ಅಗಸ್ಟ್ 03: ಕೊರೊನಾ ನೆಗೆಟಿವ್ ವರದಿ ಇಲ್ಲದೆ ಕೇರಳ ಹಾಗೂ ಮಹರಾಷ್ಟ್ರದಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ 51 ಪ್ರಯಾಣಿಕರನ್ನು ತಾತ್ಕಾಲಿಕವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಆಗಸ್ಟ್ 2 ರಂದು ಕೇರಳ ಹಾಗೂ ಮಹಾರಾಷ್ಟ್ರದಿಂದ ರೈಲಿನಲ್ಲಿ ಬಂದ ಪ್ರಯಾಣಿಕರಲ್ಲಿ ಕೋವಿಡ್ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈ ಸಂದರ್ಭ ನೆಗೆಟಿವ್ ವರದಿ ಹೊಂದಿರದ ಕೇರಳ ಮತ್ತು ಮಹಾರಾಷ್ಟ್ರದ 51 ಪ್ರಯಾಣಿಕರನ್ನುತಡೆಹಿಡಿಯಲಾಗಿತ್ತು.
ಆ ಬಳಿಕ ನಗರದ ಪುರಭವನದಲ್ಲಿ ಇರಿಸಿ ಎಲ್ಲರನ್ನೂ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಯಿತು.ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆಯ ದೃಷ್ಟಿಯಿಂದ ಅವರ ಮನೆಗಳಿಗೆ ಹೋಗಲು ಅನುಮತಿ ನೀಡಲಾಯಿತು. ವರದಿಗಳು ಬರುವವರೆಗೂ ಅವರನ್ನು ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
ಆ ಬಳಿಕ ಪುರುಷ ಪ್ರಯಾಣಿಕರನ್ನು ಪುರಭವನದ ಇರಿಸಿಕೊಳ್ಳಲು ನಿರ್ಧರಿಸಿತು. ನೆಗೆಟಿವ್ ಬರುವ ಪ್ರಯಾಣಿಕರಿಗೆ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಪಾಸಿಟಿವ್ ಬಂದ ಪ್ರಯಾಣಿಕರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ರೈಲು ನಿಲ್ದಾಣಗಳಲ್ಲಿ ತಪಾಸಣೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.