DAKSHINA KANNADA
ಕೊರೊನಾ ಲಾಕ್ ಡೌನ್ ಗೆ ಕಹಿಯಾಯಿತು ಜೇನು
ಕೊರೊನಾ ಲಾಕ್ ಡೌನ್ ಗೆ ಕಹಿಯಾಯಿತು ಜೇನು
ಪುತ್ತೂರು ಮೇ.29: ಕೊರೊನಾ ಮಹಾಮಾರಿ ಒಕ್ಕರಿಸಿದ ಬಳಿಕ ವಿಶ್ವದ ಚಿತ್ರಣವೇ ಬದಲಾಗಿದೆ. ಉದ್ಯಮ- ವ್ಯವಹಾರಗಳು ಹಳ್ಳ ಹಿಡಿಯಲಾರಂಭಿಸಿದೆ. ಇದೇ ರೀತಿಯ ಹೊಡೆತ ದಕ್ಷಿಣಕನ್ನಡ ಜಿಲ್ಲೆಯ ಜೇನು ಬೆಳೆಗಾರರ ಸಹಕಾರಿ ಸಂಘಕ್ಕೂ ಬಿದ್ದು, ನಷ್ಟದ ಅಂಚಿಗೆ ತಲುಪಿದೆ. ತನ್ನ ಉತೃಷ್ಣ ಗುಣಮಟ್ಟದ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದ್ದ, ಜೇನು ಬೆಳೆಗಾರರೇ ಸ್ಥಾಪಿಸಿದ ಈ ಸಂಸ್ಥೆಗೆ ಇದೀಗ ತಮ್ಮ ಸಿಬ್ಬಂದಿಗಳಿಗೆ ವೇತನ ನೀಡಲೂ ಸ್ಥಿತಿಯಲ್ಲಿದೆ.
ಮಾಧುರಿ ಎನ್ನುವ ಹೆಸರಿನ ಮೂಲಕ ಜೇನು ಮಾರುಕಟ್ಟೆಯಲ್ಲಿ ತನ್ನದೇ ಹೆಸರನ್ನು ಗಳಿಸಿರುವ ದಕ್ಷಿಣಕನ್ನಡ ಜೇನು ವ್ಯವಸಾಯಗಾರರ ಸಂಘಕ್ಕೆ ಕೊರೊನಾ ಭಾರೀ ಹೊಡೆತ ನೀಡಿದೆ. ತನ್ನ ಉತ್ಕೃಷ್ಟ ಗುಣಮಟ್ಟದ ಜೇನಿನಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಸಂಘದ ಜೇನು ಮಾರಾಟ ಇದೀಗ ನೆಲಕಚ್ಚಿದೆ. ಜೇನು ಬೆಳೆಗಾರರೇ ಸೇರಿ ಪ್ರಾರಂಭಿಸಿದಂತಹ ಈ ಸಂಘದಲ್ಲಿ ಒಟ್ಟು 2 ಸಾವಿರ ಜೇನು ಬೆಳೆಗಾರರಿದ್ದು, ಎಲ್ಲರೂ ತಮ್ಮ ಮನೆಯಲ್ಲಿ ಸಾಕಿದಂತಹ ಜೇನನ್ನು ಇದೇ ಸಂಘದ ಮೂಲಕ ಮಾರಾಟ ಮಾಡುತ್ತಿದ್ದಾರೆ.
ಈ ಕಾರಣಕ್ಕಾಗಿಯೇ ಯಾವುದೇ ಕಲಬೆರಕೆಯಿಲ್ಲದೆ ಕಳೆದ 8 ದಶಕಗಳಿಂದ ಈ ಸಂಘ ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನೂ ಕಂಡಿದೆ. ಆದರೆ ಕೊರೊನಾ ಹಿನ್ನಲೆಯಲ್ಲಿ ದೇಶದಲ್ಲಿ ಜಾರಿಯಾದ ಮೂರು ತಿಂಗಳ ಲಾಕ್ ಡೌನ್ ಸಂಘದ ಮಾರುಕಟ್ಟೆ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಪ್ರತಿ ತಿಂಗಳು 7 ರಿಂದ 8 ಸಾವಿರ ಲೀಟರ್ ಜೇನು ಮಾರಾಟ ಮಾಡುತ್ತಿದ್ದ ಈ ಸಂಘಕ್ಕೆ ಇದೀಗ 50 ಕಿಲೋ ಜೇನು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರ, ಆಂದ್ರಪ್ರದೇಶ, ಕೇರಳ ಸೇರಿದಂತೆ ದೇಶದ ವಿವಿಧೆಡೆಗೆ ಸಾಗಾಟವಾಗುತ್ತಿದ್ದ ಜೇನು ಗೋದಾಮಿನಲ್ಲೇ ಶೇಖರಣೆಗೊಂಡಿದೆ.
ಈ ರೀತಿಯ ನಷ್ಟದ ಕಾರಣದಿಂದಾಗಿ ಜೇನು ಸೊಸೈಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ವೇತನ ನೀಡಲೂ ಸಂಘ ಹೆಣಗಾಡಬೇಕಾದ ಸ್ಥಿತಿಗೆ ತಲುಪಿದೆ. ದೇಶದ ವಿವಿಧ ಭಾಗದಿಂದ ಈಗಲೂ ಈ ಜೇನಿಗಾಗಿ ಬೇಡಿಕೆ ಬರುತ್ತಿದ್ದರೂ, ಸೂಕ್ತ ಸಂಪರ್ಕ ವ್ಯವಸ್ಥೆಯಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಜೇನು ಬೆಳೆಗಾರರನ್ನು ಹೊಂದಿರುವ ಈ ಸಂಘದ ಸದಸ್ಯರಿಗೆ ಜೇನು ತೆಗೆಯುವ ಪ್ರಕ್ರಿಯೆಗೂ ತಡೆಯಾಗಿದೆ. ಮನೆಯ ಪರಿಸರದಲ್ಲಿ ಹಾಗೂ ಇತರ ತೋಟಗಳಲ್ಲಿ ಜೇನಿನ ಪೆಟ್ಟಿಗೆಯನ್ನು ಇಟ್ಟು ಜೇನು ಬೆಳೆಯುವ ಬೆಳೆಗಾರರಿಗೆ ಜೇನು ಪೆಟ್ಟಿಗೆ ಇದ್ದ ಪ್ರದೇಶಗಳಿಗೆ ತೆರಳಿ ಜೇನು ಸಂಗ್ರಹಿಸುವ ಪ್ರಕ್ರಿಯೆಗೂ ಸಮಸ್ಯೆಯಾಗಿದೆ. ಜೇನು ಬೆಳೆಗಾರರಿಂದ ಸಂಗ್ರಹಿಸಿದ ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ಜೇನು ಸಂಘದ ಗೋದಾಮಿನಲ್ಲೇ ಇದ್ದು, ತಿಂಗಳಿಗೆ 15 ರಿಂದ 20 ಲಕ್ಷ ರೂಪಾಯಿಗಳ ನಷ್ಟವನ್ನೂ ಸಂಘ ಇದೀಗ ಅನುಭವಿಸುವಂತಾಗಿದೆ.
ತನ್ನ ಉತೃಷ್ಣ ಗುಣಮಟ್ಟದ ಮೂಲಕ ಎಲ್ಲೆಡೆ ಸಿಹಿ ಪಸರಿಸಿದ್ದ ಜೇನು ಬೆಳೆಗಾರರ ಸಂಘ ಇದೀಗ ಕಹಿಯ ದಿನಗಳನ್ನು ಎದುರಿಸುವಂತಾಗಿದೆ. ಅಲ್ಲದೆ ಜೇನು ಸಾಕಾಣಿಕೆಯನ್ನೇ ಬದುಕನ್ನಾಗಿ ರೂಪಿಸಿಕೊಂಡಿದ್ದ ಜೇನು ಕೃಷಿಕನಿಗೂ ಕೊರೊನಾ ಹೊಡೆತ ನೀಡಿದೆ.