FILM
ಕಿರಿಕ್ ಪಾರ್ಟಿ ಸಿನೆಮಾ ಹಾಡಿನ ವಿವಾದ ಅಂತ್ಯ….!!
ಬೆಂಗಳೂರು ಜೂನ್ 29: ಕಿರಿಕ್ ಪಾರ್ಟಿ ಸಿನೆಮಾದ ಹಾಡಿಗೆ ಸಂಬಂಧಿಸಿದಂತೆ ಲಹರಿ ಸಂಸ್ಥೆ ಹಾಗೂ ನಟ ರಕ್ಷಿತ್ ಶೆಟ್ಟಿ ಅವರ ನಡುವಿನ ‘ಕಾಪಿರೈಟ್’ ವಿವಾದ ಮಾತುಕತೆ ಮೂಲಕ ಬಗೆಹರಿದಿದೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕವಾಗುವಂತೆ ಲಹರಿ ವೇಲು ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗಿರುವ ಸೆಲ್ಫಿಯೊಂದನ್ನು ರಕ್ಷಿತ್ ಶೆಟ್ಟಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಕಿರಿಕ್ ಪಾರ್ಟಿ ಸಿನೆಮಾದಲ್ಲಿನ ಹಾಡೊಂದರಲ್ಲಿ ಶಾಂತಿ ಕ್ರಾಂತಿ ಸಿನೆಮಾದ ಹಾಡನ್ನು ಅನುಮತಿ ಇಲ್ಲದ ಬಳಸಲಾಗಿತ್ತು, ಈ ಹಿನ್ನಲೆ 2016ರ ಡಿಸೆಂಬರ್‌ನಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಬಿಡುಗಡೆ ವೇಳೆ ಲಹರಿ ಸಂಸ್ಥೆಯು ಸಿನಿಮಾ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಲಹರಿ ಸಂಸ್ಥೆಯು ದಾಖಲಿಸಿದ್ದ ಎರಡನೇ ಪ್ರಕರಣದ ವಿಚಾರಣೆಗೆ ಹಲವು ಬಾರಿ ಗೈರಾಗಿದ್ದರಿಂದಾಗಿ ರಕ್ಷಿತ್ ಶೆಟ್ಟಿ ಹಾಗೂ ಅಜನೀಶ್ ಲೋಕನಾಥ್ ಅವರ ವಿರುದ್ಧ ಇತ್ತೀಚೆಗೆ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
‘ಒಂದು ಘಟನೆ..ಹಲವು ದೃಷ್ಟಿಕೋನ. ಈ ದೃಷ್ಟಿಕೋನಗಳನ್ನು ಪರಸ್ಪರ ಹಂಚಿಕೊಂಡಾಗ ಹಾಗೂ ಅರ್ಥೈಸಿಕೊಂಡಾಗ ಮನುಷ್ಯರಾಗಿ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ. ಎಲ್ಲವೂ ಪರಸ್ಪರ ಗೌರವ ಮತ್ತು ಪ್ರೀತಿಯ ನಿರ್ದಿಷ್ಟ ಸಂಧಿಯಲ್ಲಿ ಕೂಡಬೇಕು. ಇದುವೇ ನಮ್ಮೊಳಗಿನ ಹಾಗೂ ಹೊರಗಿನ ಬೆಳವಣಿಗೆಯ ನೈಜ ಗುಣ. ನಾವು ಏನನ್ನೂ ನೀಡಿಲ್ಲ ಏನನ್ನೂ ಪಡೆದುಕೊಂಡಿಲ್ಲ. ನಮ್ಮ ನಮ್ಮ ಅಭಿಪ್ರಾಯಗಳನ್ನಷ್ಟೇ ಹಂಚಿಕೊಂಡಿದ್ದೇವೆ’ ಎಂದು ರಕ್ಷಿತ್ ಟ್ವೀಟ್ ಜೊತೆಗೆ ಉಲ್ಲೇಖಿಸಿದ್ದಾರೆ.