LATEST NEWS
ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಮಠಾಧೀಶ ಪಟ್ಟಕ್ಕೆ ಕುತ್ತು
ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿ ಅವರ ಮಠಾಧೀಶ ಪಟ್ಟಕ್ಕೆ ಕುತ್ತು
ಉಡುಪಿ ಜುಲೈ 4: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ಶಿರೂರು ಲಕ್ಷ್ಮೀವರ ಶ್ರೀಗಳು ಸನ್ಯಾಸ ನಿಯಮ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ವಿವಾದ ಇನ್ನೊಂದು ರೂಪ ಪಡೆದುಕೊಂಡಿದ್ದು, ಶಿರೂರು ಮಠದ ಪಟ್ಟದ ದೇವರ ಮೂರ್ತಿಯನ್ನು ಶಿರೂರು ಮಠಕ್ಕೆ ನೀಡಲು ಸಪ್ತ ಮಠಾಧೀಶರು ನಿರಾಕರಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭ ಶಿರೂರು ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಮಠದ ಪಟ್ಟದ ದೇವರಿಗೆ ನಿತ್ಯ ಪೂಜೆ ನಡೆಯಬೇಕಾದ ಹಿನ್ನಲೆಯಲ್ಲಿ ಶಿರೂರು ಮಠದ ಪಟ್ಟದ ದೇವರನ್ನು ಅದಮಾರು ಶ್ರೀಗಳು ಮೂಲಕ ಕೃಷ್ಣ ಮಠಕ್ಕೆ ಕಳುಹಿಸಲಾಗಿತ್ತು. ಅಂದಿನಿಂದ ಶಿರೂರು ಶ್ರೀಗಳ ಮಠದ ಪಟ್ಟದ ದೇವರಿಗೆ ಕೃಷ್ಣ ಮಠದಲ್ಲೇ ಪೂಜೆ ನಡೆಯುತ್ತಿದೆ.
ಜೂನ್ 23 ರಂದು ಕೃಷ್ಣ ಮಠದಲ್ಲಿ ಏಕಾದಶಿ ಆಚರಿಸಲಾಗಿತ್ತು. ಆದರೆ ಶಿರೂರ ಮಠಕ್ಕೆ ಏಕಾದಶಿ ಜೂನ್ 24 ರಂದು ಇದ್ದ ಕಾರಣ ಏಕಾದಶಿ ಪೂಜೆ ನಮ್ಮ ಮಠದಲ್ಲೇ ನಡೆಯಬೇಕೆಂದು ಶಿರೂರ ಶ್ರೀಗಳು ಪಟ್ಟದ ದೇವರನ್ನು ವಾಪಾಸ್ ಕೊಡಿ ಎಂದು ಕೃಷ್ಣ ಮಠದಲ್ಲಿ ಕೇಳಿದ್ದಾರೆ. ಆದರೆ ಉಳಿದ ಮಠಾಧೀಶರ ತೀರ್ಮಾನದಂತೆ ದೇವರನ್ನು ಕೊಡದಿರಲು ನಿರ್ಧರಿಸಿದ್ದು, ಪರ್ಯಾಯ ಶ್ರೀಗಳು ದೇವರನ್ನು ಹಸ್ತಾಂತರಿಸಲು ನಿರಾಕರಿಸಿದ್ದಾರೆ.
ಸಪ್ತಮಠಾಧೀಶರ ಈ ನಿರ್ಧಾರದಿಂದ ಅಸಮಧಾನಗೊಂಡಿದ್ದ ಶಿರೂರು ಶ್ರೀಗಳು ಬಳಿಕ ಜೂನ್ 24 ರಂದು ಸಾಯಂಕಾಲ ಮಠದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಶಾಸಕ ರಘುಪತಿ ಭಟ್ ಸೇರಿದಂತೆ ಅಷ್ಠ ಮಠಾಧೀಶರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶಿರೂರು ಶ್ರೀಗಳು ನಾನು ಮಾಧ್ಯಮಗಳಿಗೆ ಯಾವುದೇ ವಿವಾದಿತ ಹೇಳಿಕೆಗಳನ್ನು ನೀಡಿಲ್ಲ ಎಂದು ಸಮರ್ಥಿಸಿಕೊಂಡರು.
ಆದರೆ ಇದಕ್ಕೆ ಸಮ್ಮತಿಸದ ಉಳಿದ ಮಠಾಧೀಶರು ಶಿರೂರು ಶ್ರೀಗಳಿಗೆ ನೀವು ಶಿಷ್ಯನ್ನು ಸ್ವೀಕರಿಸಿ ನಾವು ಅವರಿಗೆ ದೇವರನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಠದ ಆಚರಣೆಗಳನ್ನು ಪಾಲಿಸದ ನೀವು ಪೀಠದಲ್ಲಿ ಮುಂದುವರಿಯಬಾರದು ಎಂದು ಉಳಿದ ಏಳು ಮಠಾಧೀಶರು ಸಹಿ ಹಾಕಿ ಪತ್ರ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿರೂರು ಶ್ರೀಗಳು ಇತ್ತೀಚೆಗೆ ಮಠದ ಪಟ್ಟದ ದೇವರನ್ನು ಕೇಳಲು ಶ್ರೀಕೃಷ್ಣ ಮಠಕ್ಕೆ ಹೋಗಿದ್ದೆ, ಆದರೆ ಹಸ್ತಾಂತರಿಸಲು ನಿರಾಕರಿಸಿದ್ದಾರೆ. ನಾವು ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ ಅವರು , ಅಸಾಧ್ಯವಾದರೆ ನ್ಯಾಯಲಯದ ಮೊರೆ ಹೋಗಲು ಸಿದ್ದ ಎಂದು ತಿಳಿಸಿದರು.