BELTHANGADI
‘ಬೆಳ್ತಂಗಡಿಯ ಬೀದಿ ನಾಯಿಗಳನ್ನು ನಿಯಂತ್ರಿಸಿ’; WIM
ಬೆಳ್ತಂಗಡಿ : ಬೆಳ್ತಂಗಡಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ವತಿಯಿಂದ ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಗಳಾದ ರಾಜೇಶ್.ಕೆ ರವರಿಗೆ ಮನವಿಯನ್ನು ನೀಡಲಾಯಿತು.
ಬೆಳ್ತಂಗಡಿ ನಗರ ವ್ಯಾಪ್ತಿಯ ಸಂಜಯ ನಗರ, ಉದಯನಗರ, ಸುದೆ ಮುಗೇರು, ಸಂತೆಕಟ್ಟೆ, ರೆಂಕೆದ ಗುತ್ತು, ಮುಗುಳಿ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ವಯೋವೃದ್ಧರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಬೀದಿ ನಾಯಿಗಳ ಉಪಟಳ ಹೇಳ ತೀರದು. ಅದರಲ್ಲೂ ಬೈಕ್ ಸವಾರರನ್ನು ಈ ನಾಯಿಗಳು ಅಟ್ಟಿಸಿಕೊಂಡು ಹೋಗಿ ಭಯ ಹುಟ್ಟಿಸುವುದಲ್ಲದೆ ಕಚ್ಚುತ್ತವೆ. ಭಯಗೊಂಡ ಅನೇಕರು ಅಪಘಾತಕ್ಕೂ ಒಳಗಾಗಿದ್ದಾರೆ.
ಪ್ರತಿ ವರ್ಷ ಪಂಚಾಯತ್ ವತಿಯಿಂದಲೇ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಚಿಕಿತ್ಸೆ ಮಾಡದಿರುವುದರಿಂದ ಬೀದಿ ನಾಯಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ. ಮಕ್ಕಳಿಗೂ ಬೀದಿನಾಯಿ ಕಚ್ಚಿವೆ. ಆದ್ದರಿಂದ ಪಂಚಾಯತ್ ಅಧಿಕಾರಿಗಳು ನಾಯಿಗಳ ಹಾವಳಿ ನಿಯಂತ್ರಿಸಿ ಸಾರ್ವಜನಿಕರ ಪ್ರಾಣ ರಕ್ಷಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಸಮಿತಿ ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ, ಸಫ್ರಾ, ಮುಮ್ತಾಝ್, ರುಬಿಯಾ, ಸಫೀದಾ ಉಪಸ್ಥಿತರಿದ್ದರು.