LATEST NEWS
ಗೋವಾ ಬಳಿ ಕಂಟೈನರ್ ಸಾಗಾಟದ ಹಡಗಿಗೆ ಬೆಂಕಿ, ರಕ್ಷಣೆಗೆ ಧಾವಿಸಿದ ಕೋಸ್ಟ್ ಗಾರ್ಡ್..!
ಪಣಜಿ : ಗೋವಾ ಬಳಿ ಮರ್ಚೆಂಟ್ ಕಂಟೈನರ್ ಹಡಗಿನಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳಕ್ಕೆ ಕೋಸ್ಟ್ ಗಾರ್ಡ್ ಧಾವಿಸಿದ್ದು ರಕ್ಷಣಾ ಕಾರ್ಯ ಆರಂಭಿಸಿದೆ.
ಪನಾಮ ಧ್ವಜದ ಕಂಟೈನರ್ ಹಡಗು MV ಮಾರ್ಸ್ಕ್ ಫ್ರಾಂಕ್‌ಫರ್ಟ್ ( MV Maersk Frankfurt) ಹೆಸರಿನ ಹಡಗು ಮುಂದ್ರಾದಿಂದ ಶ್ರೀಲಂಕಾದ ಕೊಲಂಬೊಗೆ ಸಾಗುತಿತ್ತು. ಗೋವಾದ ನೈಋತ್ಯಕ್ಕೆ 102 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು ಸಹಾಯಕ್ಕಾಗಿ ಭಾರತೀಯ ಕೋಸ್ಟ್ ಗಾರ್ಡಿಗೆ ಮನವಿ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದ ನಡುವೆಯೂ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ನಡೆಸುತ್ತಿದೆ. ಜೊತೆಗೆ ಅಗ್ನಿಶಾಮಕ ಕಾರ್ಯಕ್ಕೆ ಸಹಾಯ ಮಾಡಲು ಇನ್ನೂ ಎರಡು ಕೋಸ್ಟ್ ಗಾರ್ಡ್ ಹಡಗುಗಳನ್ನು ಕಳುಹಿಸಲಾಗಿದೆ. ಕೋಸ್ಟ್ ಗಾರ್ಡ್ ಹಡಗುಗಳಾದ ಸುಜೀತ್, ಸಚೇತ್ ಮತ್ತು ಸಾಮ್ರಾಟ್ ಬೆಂಕಿ ನಂದಿಸುವ ಮತ್ತು ರಕ್ಷಾಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.
ವೈಮಾನಿಕ ಮೌಲ್ಯಮಾಪನಕ್ಕಾಗಿ ಕೋಸ್ಟ್ ಗಾರ್ಡ್‌ನ ಡಾರ್ನಿಯರ್ ವಿಮಾನವನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ. ಹಡಗು ಅಂತರಾಷ್ಟ್ರೀಯ ಸಾಗರ ಅಪಾಯಕಾರಿ ಸರಕುಗಳ (IMDG) ಸರಕುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದ್ದು ಈ ಬಗ್ಗೆ ತನಿಖೆ ಆರಂಭವಾಗಿದೆ. ಇದುವರೆಗೆ ಯಾವುದೇ ಸಾವು ನೋವು ವರದಿಯಾಗಿಲ್ಲ..