LATEST NEWS
ನನ್ನ ಬಳಿ 20 ಕೆ.ಜಿ ಆರ್‌ಡಿಎಕ್ಸ್ ಸ್ಫೋಟಕ ಇದೆ, ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ

ನವದೆಹಲಿ ಎಪ್ರಿಲ್ 1: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಲೆ ಬೆದರಿಕೆ ಒಡ್ಡಿ ಇ-ಮೇಲ್‌ವೊಂದನ್ನು ಮುಂಬೈನ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಶಾಖಾ ಕಚೇರಿಗೆ ಕಳುಹಿಸಲಾಗಿದೆ.ನನ್ನ ಬಳಿ 20 ಕೆ.ಜಿ ಆರ್‌ಡಿಎಕ್ಸ್ ಸ್ಫೋಟಕ ಇದೆ, ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ ಎಂದು ಇಮೇಲ್ ನಲ್ಲಿ ಬೆದರಿಕೆ ಒಡ್ಡಲಾಗಿದೆ.
ಈ ಮೇಲ್ ನಲ್ಲಿ ಪ್ರಧಾನಿ ಮೋದಿ ಜೊತೆ ಲಕ್ಷಾಂತರ ಜನರ ಜೀವ ತೆಗೆಯಲು ನಾನು ಸಿದ್ಧನಾಗಿದ್ದೇನೆ ಎಂದೂ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದು ಬಂದಿದೆ. ‘ನಾನು ಕೆಲ ಭಯೋತ್ಪಾದಕರನ್ನು ಭೇಟಿಯಾಗಿದ್ದೆ. ಅವರು ಆರ್‌ಡಿಎಕ್ಸ್ ನೀಡುವ ಮೂಲಕ ನೆರವು ನೀಡುತ್ತಿದ್ದಾರೆ. ನನಗೆ ಸುಲಭವಾಗಿ ಬಾಂಬ್ ಸಿಕ್ಕಿದ್ದಕ್ಕೆ ಅತ್ಯಂತ ಸಂತೋಷವಾಗುತ್ತಿದೆ.

ಈಗ ನಾನು ಎಲ್ಲ ಕಡೆ ಸ್ಫೋಟ ನಡೆಸುತ್ತೇನೆ. ಇದಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ. 20 ಸ್ಲೀಪರ್ ಸೆಲ್‌ಗಳು ಕ್ರಿಯಾಶೀಲವಾಗಲಿವೆ. ಲಕ್ಷಾಂತರ ಜನರನ್ನು ಕೊಲ್ಲುತ್ತೇವೆ’ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಇಮೇಲ್ ಕಳುಹಿಸಿದವನನ್ನು ಪತ್ತೆ ಮಾಡಲು ಎನ್‌ಐಎ ಮತ್ತು ಇತರ ತನಿಖಾ ಸಂಸ್ಥೆಗಳು ಮುಂದಾಗಿವೆ. ಐಪಿ ಅಡ್ರೆಸ್ ಜಾಡು ಹಿಡಿದು ಮೇಲ್ ಕಳುಹಿಸಿದ ದುಷ್ಕರ್ಮಿಯ ವಿಳಾಸ ಪತ್ತೆ ಮಾಡಲಾಗುತ್ತಿದೆ. ಬೆದರಿಕೆ ಇಮೇಲ್ ಕುರಿತಂತೆ ಎನ್‌ಐಎ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.