LATEST NEWS
ಅಮಾಯಕ ಬಶೀರ್ ನ ಹತ್ಯೆಗೆ ಜೈಲಿನಲ್ಲಿ ಸಂಚು – ಸಂಶಯ ಮೂಡಿಸಿದ ಪೊಲೀಸ್ ತನಿಖೆ

ಅಮಾಯಕ ಬಶೀರ್ ನ ಹತ್ಯೆಗೆ ಜೈಲಿನಲ್ಲಿ ಸಂಚು – ಸಂಶಯ ಮೂಡಿಸಿದ ಪೊಲೀಸ್ ತನಿಖೆ
ಮಂಗಳೂರು ಜನವರಿ 24: ಜನವರಿ 3 ರಂದು ನಡೆದ ದೀಪಕ್ ರಾವ್ ಹತ್ಯೆಯ ನಂತರ ಅದೇ ದಿನ ರಾತ್ರಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೃತಪಟ್ಟ ಅಬ್ದುಲ್ ಬಶೀರ್ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಇನ್ನೂ ನಾಲ್ಕು ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ತಿಳಿಸಿದ್ದಾರೆ.
ಈ ಮಧ್ಯೆ ಅಬ್ದುಲ್ ರಶೀದ್ ಅವರ ಹತ್ಯೆಗೆ ಜೈಲಿನಲ್ಲೆ ಸಂಚು ರೂಪಿಸಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಮಂಗಳೂರು ಪೊಲೀಸ್ ಕಮಿಷನರ್ ಹೊರ ಹಾಕಿದ್ದಾರೆ. ಈ ಅಬ್ದುಲ್ ಬಶೀರ್ ಪ್ರಕರಣದಲ್ಲಿ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಬಂಧಿತರಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನ ದಲ್ಲಿರುವ ಬಂಟ್ವಾಳದ ಮಿಥುನ್ ಪೂಜಾರಿ, ಮಂಗಳೂರು ಕಾವೂರಿನ ತಿಲಕ್ ರಾಜ್ , ಬಂಟ್ವಾಳ ಪರಂಗೀಪೇಟೆಯ ರಾಜು ಹಾಗು ಮಂಗಳೂರು ಕೋಡಿಕಲ್ ನಿವಾಸಿ ಅನೂಪ್ ಕುಲಾಲ್ ಈ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ನಡುವೆ ಪೊಲೀಸ್ ಇಲಾಖೆಯ ತನಿಖೆಯ ಮೇಲೆಯ ಸಂಶಯ ಮೂಡುತ್ತಿದೆ. ಅಮಾಯಕ ಬಶೀರ್ ಕೊಲೆಗೆ ಜೈಲಿನಿಂದಲೇ ಸಂಚು ನಡೆಸಲಾಗಿದೆ ಎಂಬ ಪೊಲೀಸ್ ಕಮಿಷನರ್ ಅವರ ಸ್ಪೋಟಕ ಮಾಹಿತಿ ಗೊಂದಲ ಸೃಷ್ಠಿಸಿದೆ.
ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದ ಬಂಟ್ವಾಳದ ಮಿಥುನ್ ಪೂಜಾರಿ, ಮಂಗಳೂರು ಕಾವೂರಿನ ತಿಲಕ್ ರಾಜ್ , ಬಂಟ್ವಾಳ ಪರಂಗೀಪೇಟೆಯ ರಾಜು ಹಾಗು ಮಂಗಳೂರು ಕೋಡಿಕಲ್ ನಿವಾಸಿ ಅನೂಪ್ ಕುಲಾಲ್ ಸೇರಿ ಸಂಚು ರೂಪಿಸಿ ಈ ಕೊಲೆಯನ್ನು ನಡೆಸಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಆದರೆ ದೀಪಕ್ ರಾವ್ ಕೊಲೆಯಾಗಿರುವುದು ಜನವರಿ 3 ರ ಮಧ್ಯಾಹ್ನ 12 ಗಂಟೆ ಸುಮಾರಿಗೆ, ಅದೇ ದಿನ ಬಶೀರ್ ಮಾರಣಾಂತಿಕ ಹಲ್ಲೆಯಾಗಿದ್ದು ರಾತ್ರಿ 10.30 ರ ಸುಮಾರಿಗೆ. ಅಂದರೆ ದೀಪಕ್ ಕೊಲೆಯಾದ ನಾಲ್ಕೈದು ಗಂಟೆಯ ಒಳಗೆ ಬಶೀರ್ ಕೊಲೆಗೆ ಸಂಚು ನಡೆಯುತ್ತದೆ ಎನ್ನುವುದನ್ನು ನಂಬುವುದು ಕಷ್ಟ.
ಬಶೀರ್ ಹತ್ಯೆಗೆ ಜೈಲಿನಲ್ಲಿ ಸಂಚು ರೂಪಿಸಿದ್ದೇ ಆದಲ್ಲಿ ಕೃತ್ಯ ಎಸಗಿದ್ದ, ಆರೋಪಿಗಳು ಜೈಲಿಗೆ ಭೇಟಿ ನೀಡಿದ್ದಾದರೂ ಎಂದು? ಎನ್ನುವ ಪ್ರಶ್ನೆ ಮೂಡುತ್ತದೆ. ಒಂದು ವೇಳೆ ಬಶೀರ್ ನನ್ನು ಈ ಹಿಂದೆಯೇ ಈ ಆರೋಪಿಗಳು ಟಾರ್ಗೆಟ್ ಮಾಡಿದ್ದೇ ಆಗಿದ್ದಲ್ಲಿ, ಟಾರ್ಗೆಟ್ ಗೆ ಕಾರಣವೇನು ಎನ್ನುವುದನ್ನೂ ಪೋಲೀಸರ ಸ್ಪಷ್ಟಪಡಿಸಬೇಕಿತ್ತು.
ಪೋಲೀಸರ ಹಾಗೂ ಇತರ ಮಾಧ್ಯಮ ವರದಿಗಳ ಪ್ರಕಾರ ಬಶೀರ್ ಒಬ್ಬ ಅಮಾಯಕ ಹಾಗೂ ಆತನ ಮೇಲೆ ಯಾವುದೇ ಪ್ರಕರಣಗಳು ಆತ ಸಾಯುವವರೆಗೂ ದಾಖಲಾಗಿಲ್ಲ ಎಂದ ಮೇಲೆ ಆತ ಆರೋಪಿಗಳ ಟಾರ್ಗೆಟ್ ಹೇಗಾಗುತ್ತಾನೆ ಎನ್ನುವ ಸಂಶಯ ಸಾಮಾನ್ಯವಾಗಿ ಮೂಡುತ್ತಿದೆ.
ಈ ಎಲ್ಲಾ ಗೊಂದಲಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಿರುವಾಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಒಂದೋ ಸತ್ಯವನ್ನು ಮರೆ ಮಾಚುತ್ತಿದ್ದಾರೆ. ಇಲ್ಲವೇ ತಮ್ಮ ಮೇಲಿನ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಫಿಕ್ಸ್ ಮಾಡಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ.