DAKSHINA KANNADA
ಶಾಸಕ ಆಶೋಕ್ ರೈ ವಿರುದ್ದ ಮಾತನಾಡಿದ್ದಕ್ಕೆ ನನ್ನ ಮೇಲೆ ಪೊಲೀಸ್ ದೌರ್ಜನ್ಯ – ಹಕೀಂ ಕೂರ್ನಡ್ಕ ಆರೋಪ

ಪುತ್ತೂರು ಮಾರ್ಚ್ 18: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಕಾರಣಕ್ಕೆ ನನ್ನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಆರೋಪಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಶಾಸಕ ಅಶೋಕ್ ಕುಮಾರ್ ರೈ ಒತ್ತಡದಿಂದ ಪೋಲೀಸರಿಂದ ದೌರ್ಜನ್ಯ ನಡೆಸಿದ್ದಾರೆ. ಮೂರು ಜೀಪ್ ನಲ್ಲಿ ಬಂದ ಪೋಲೀಸರು ನನ್ನನ್ನು ವಶಕ್ಕೆ ಪಡೆದು, ನನ್ನ ಕಾರಿನಲ್ಲಿ ಒಬ್ಬ ಪೋಲೀಸ್ ಅಧಿಕಾರಿಯನ್ನು ಬಿಟ್ಟಿದ್ದರು, ನನ್ನ ಕಾರಿನ ಮುಂದೆ ಎರಡು ಪೋಲೀಸ್ ಜೀಪ್ ಮತ್ತು ಹಿಂಬದಿ ಒಂದು ಪೋಲೀಸ್ ಜೀಪ್ ಇತ್ತು, ಮಂಗಳೂರು ರಸ್ತೆಯಾಗಿ ನನ್ನನ್ನು ಒತ್ತಾಯಪೂರ್ವಕ ಕೊಂಡೊಯ್ಯುತ್ತಿದ್ದರು ಎಂದ ಅವರು ನನ್ನನ್ನು ಎನ್ಕೌಂಟರ್ ಮಾಡುವ ಪ್ರಯತ್ನ ಮಾಡುವ ಸಂಶಯ ನನಗೆ ಬಂದಿತ್ತು ಎಂದು ಆರೋಪಿಸಿದರು, ಪೊಲೀಸರು ನನ್ನ ಒಂದು ಮೊಬೈಲ್ ಅನ್ನ ಪೋಲೀಸರು ಮೊದಲೇ ತಮ್ಮ ಬಳಿ ಇರಿಸಿದ್ದರು, ಆದರೆ ಇನ್ನೊಂದು ಮೊಬೈಲ್ ಮೂಲಕ ನಾನು ಸ್ಪೀಕರ್ ಪಿಎ ಮತ್ತು ಆಪ್ತರಿಗೆ ವಿಚಾರ ತಿಳಿಸಿದೆ. ಸ್ಪೀಕರ್ ಗಮನಕ್ಕೆ ಬಂದ ವಿಚಾರ ತಿಳಿದ ಪೋಲೀಸರು ತಕ್ಷಣವೇ ಡಿವೈಎಸ್ಪಿ ಕಛೇರಿಗೆ ವಾಹನವನ್ನು ತಿರುಗಿಸಿದ್ದಾರೆ. ಸಂಜೆಯಿಂದ ರಾತ್ರಿ 10 ಗಂಟೆ ವರೆಗೆ ನನ್ನನ್ನು ಡಿವೈಎಸ್ಪಿ ಕಛೇರಿಯಲ್ಲಿ ಇಟ್ಟಿದ್ದರು, ಬಳಿಕ ಕೆಲವು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಬಂದ ಬಳಿಕ ಮನೆಗೆ ಕಳುಹಿಸಿದ್ದಾರೆ.

ನಾನು ಯಾವುದೇ ಕೋಮುಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ, ಶಾಸಕ ಅಶೋಕ್ ಕುಮಾರ್ ರೈ ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ ಎಂದಿದ್ದೆ. ಎಲ್ಲಾ ಹುದ್ದೆಗಳನ್ನು ಸಂಘಪರಿವಾರದಿಂದ ಬಂದವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ತಾಕತ್ತು ತೋರಿಸಬೇಕು ಎಂದು ಹೇಳಿದ್ದೆ, ಈ ವಿಚಾರವಾಗಿ ಶಾಸಕರ ಆಪ್ತರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದೆ. ಕೊಲೆ ಆರೋಪಿಗಳಿಂದಲೂ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದರು.
ಸ್ವತಹ ಪೋಲೀಸರೇ ನನ್ನ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ, ಆದರೆ ನನ್ನ ಬಾಯಿ ಮುಚ್ಚಿಸಲು ಯಾರಿಗೂ ಸಾಧ್ಯವಿಲ್ಲ, ಅನ್ಯಾಯದ ವಿರುದ್ಧ ನಾನು ಮಾತಾಡುತ್ತೇನೆ. ಕೋಮುಪ್ರಚೋದನಾಕಾರಿ ಭಾಷಣ ಮಾಡಿದ ಸೂಲಿಬೆಲೆ ವಿರುದ್ಧ ದೂರನ್ನು ಪುತ್ತೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ನೀಡಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ನನ್ನ ಮೇಲೆ ದೂರು ನೀಡುತ್ತಾರೆ. ತಾಕತ್ತಿದ್ದರೆ ಕೃಷ್ಣಪ್ರಸಾದ್ ಆಳ್ವ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಹಕೀಂ ಕೂರ್ನಡ್ಕ್ ಸವಾಲು ಹಾಕಿದ್ದಾರೆ.